ಹನೂರು ತಾಲೂಕಿನಾದ್ಯಂತ ಮಳೆಯಿಂದ ಅವಾಂತರ ಸೃಷ್ಟಿ

11 HANUR 1
ಮಂಗಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ವಿದ್ಯುತ್ ಕಂಬವೊಂದು ನೆಲಕ್ಕುರುಳಿರುವುದು.
Published on

ಹನೂರು: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದರೆ, ಕೆಲವು ಕಡೆಗಳಲ್ಲಿ ಹಾನಿಯಾಗಿ ಅವಾಂತರ ಸೃಷ್ಟಿಸಿದೆ.

ಕಳೆದ ಒಂದು ತಿಂಗಳಿನಿಂದಲೂ ದಿನಗಣನೆ ಎಣಿಸುತ್ತಿದ್ದ ಮಳೆರಾಯ ಶುಕ್ರವಾರ ರಾತ್ರಿ ತಾಲೂಕಿನಾದ್ಯಂತ ಇಳೆಗೆ ಜೋರು ಮಳೆ ಸುರಿಸಿದ್ದಾನೆ. ಇದರಿಂದ ಜಮೀನಿನಲ್ಲಿ ವೈರುಗಳು ಸೊರಗುತ್ತಿರುವುದನ್ನು ಕಂಡು ಮಳೆಗಾಗಿ ಆಕಾಶವನ್ನೇ ಎದುರು ನೋಡುತ್ತಿದ್ದ ರೈತಾಪಿ ವರ್ಗದಲ್ಲಿ ಕೊಂಚ ಸಮಾಧಾನ ಮೂಡಿಸಿದೆ. ಈ ಮಳೆ ಕೆಲವು ಕಡೆಗಳಲ್ಲಿ ಮಾತ್ರ ಹಾನಿಯನ್ನು ಹೊರತುಪಡಿಸಿದರೆ, ಕೃಷಿಗೆ, ಕುಡಿಯವ ನೀರು ಹಾಗೂ ಅಂತರ್ಜಲ ಮಟ್ಟ ಸುಧಾರಣೆಗೆ ಅನುಕೂಲವಾಗಿದೆ. ತಾಲೂಕಿನ ಮಂಗಲ ಗ್ರಾಮದಲ್ಲಿ ಸುರಿದ ಜೋರು ಮಳೆಗೆ ವಿದ್ಯುತ್ ಕಂಬವೊಂದು ನೆಲಕ್ಕುರುಳಿದರೆ, ಮನೆಯ ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ. ಹಾಗೆಯೇ ಪೊನ್ನಾಚಿ ಹಾಗೂ ಬಂಡಳ್ಳಿ ಸಮೀಪದ ಸುಂಟರದೊಡ್ಡಿಯಲ್ಲಿ ಮನೆ ಗೋಡೆ ಕುಸಿದು ಹಾನಿಯಾಗಿದೆ. ಶಾಗ್ಯ ಗ್ರಾಮದಲ್ಲಿ ಆಗ್ರೋ ಸೆಂಟರ್, ಮನೆಗಳಿಗೆ ನೀರು ನುಗ್ಗಿದ್ದು ಅವಾಂತರ ಸೃಷ್ಠಿಸಿದೆ.

ನೆಲಕ್ಕುರುಳಿದ ವಿದ್ಯುತ್ ಕಂಬ, ಕುಸಿದ ಗೋಡೆ: ತಾಲೂಕಿನ ಮಂಗಲ ಗ್ರಾಮದಲ್ಲಿ ರಾತ್ರಿ ಸುಮಾರು 9.30ರಲ್ಲಿ ಆರಂಭವಾದ ಜೋರು ಮಳೆ ತಡರಾತ್ರಿಯವರೆಗೂ ಎಡಬಿಡದೇ ಸುರಿಯಿತು. ಪರಿಣಾಮ ಮುಸ್ಲಿಂ ಬಡಾವಣೆಗೆ ಹೊಂದಿಕೊಂಡಂತಿರುವ ರಂಗದಮಾಳದಲ್ಲಿ ವಿದ್ಯುತ್ ಕಂಬವೊಂದು ನೆಲಕ್ಕುರುಳಿದೆ. ಇನ್ನು ಗ್ರಾಮದ ಮುಖ್ಯರಸ್ತೆ ಬದಿಯ ಮನೆಯೊಂದರಲ್ಲಿ ವೃದ್ಧೆ ಮಾದಮ್ಮ ಎಂಬುವರು ಮಲಗಿದ್ದ ವೇಳೆ ಮುಂಭಾಗದ ಛಾವಣಿ ಹಾಗೂ ಗೋಡೆ ಸಂಪೂರ್ಣ ಕುಸಿದಿದ್ದು, ಕೆಲ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಅದೃಷ್ಟವಶಾತ್ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಗೆಯೇ ಕಾಡಂಚಿನ ಗ್ರಾಮ ಪೊನ್ನಾಚಿಯಲ್ಲಿ ರಾಜಮ್ಮ ಎಂಬುವರ ಮನೆ ಗೋಡೆ ಕುಸಿದಿದೆ. ಮನೆಯಲ್ಲಿದ್ದವರು ಪಾರಾಗಿದ್ದಾರೆ. ಮನೆ ಹಾನಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವುದರ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಮಂಗಲ ಗ್ರಾಮದಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿದ ಪರಿಣಾಮ ಇಡೀ ರಾತ್ರಿ ಗ್ರಾಮಕ್ಕೆ ವಿದ್ಯುತ ಸಂಪರ್ಕ ಕಡಿತಗೊಂಡಿತ್ತು. ಶನಿವಾರ ಆಗಮಿಸಿದ ಸಿಬ್ಬಂದಿ ವಿದ್ಯುತ್ ಕಂಬವನ್ನು ಅಳವಡಿಸಿ 8ರ ಬಳಿಕ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net