

ನವದೆಹಲಿ: ಇನ್ನು ಹೆಚ್ಚು ರಾಜ್ಯ ಹಾಗೂ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಇನ್ನಷ್ಟು ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ. ಕೇಂದ್ರ ಸರ್ಕಾರದ ಅನ್ಲಾಕ್ 4 ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜತೆಗೆ, ಕೇಂದ್ರ ಗೃಹ ಸಚಿವಾಲಯದ ಅಂತಿಮ ಸೂಚನೆಗೆ ಕಾಯಲಾಗುತ್ತಿದೆ.
ಸೆಪ್ಟಂಬರ್ 21ರ ನಂತ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಜತೆಗೆ, ಸೆಪ್ಟಂಬರ್ 7ರಿಂದ ಮೆಟ್ರೋ ರೈಲುಗಳ ಸಂಚಾರವೂ ಶುರುವಾಗಲಿದೆ. ಈ ಕಾರಣಕ್ಕೆ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ.
ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 25ರಿಂದ ಎಲ್ಲ ರೈಲುಗಳ ಓಡಾಟವನ್ನು ಬಂದ್ ಮಾಡಲಾಗಿತ್ತು. ಮೇ 1ರ ನಂತರ ಶ್ರಮಿಕ್ ರೈಲುಗಳನ್ನು ಆರಂಭಿಸಲಾಯಿತು. ಬಳಿಕ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಬೇಡಿಕೆಗೆ ಅನುಗುಣವಾಗಿ ನೂರು ವಿಶೇಷ ರೈಲಗಳ ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.