

ನವದೆಹಲಿ: ರೈಲ್ವೇ ಮಂಡಳಿಯು ನಿವೃತ್ತ ನೌಕರರಿಗೆ ಮತ್ತೆ ಉದ್ಯೋಗ ನೀಡಲು ನಿರ್ಧರಿಸಿದೆ. ರೈಲ್ವೇ(Railway)ಯಲ್ಲಿ ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರೈಲ್ವೇಯಲ್ಲಿ ದೇಶಾದ್ಯಂತ ವಿವಿಧ ವಲಯಗಳಲ್ಲಿ ಖಾಲಿ ಇರುವ 25 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಭಿಯಾನವನ್ನು ಆರಂಭಿಸಲಾಗಿದೆ. 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ರೈಲ್ವೇ ನೌಕರರನ್ನು ತಾತ್ಕಾಲಿಕವಾಗಿ ಮೇಲ್ವಿಚಾರಕರು ಮತ್ತು ಟ್ರ್ಯಾಕ್‌ಮೆನ್‌ಗಳಾಗಿ ತೊಡಗಿಸಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಮಂಡಳಿ ತಿಳಿಸಿದೆ.
ನೌಕರರು ಸೇವೆ, ಪ್ರಯಾಣ ಭತ್ಯೆ ಮತ್ತು ಕಡೆಯದಾಗಿ ಪಡೆದ ಸಂಬಳದ ಜತೆಗೆ ಅಧಿಕೃತ ಪ್ರವಾಸಗಳಂತಹ ಪ್ರಯೋಜನಗಳನ್ನು ಒಳಗೊಂಡಿದೆ. ಆದರೆ ವೇತನ ಅಥವಾ ಇತರ ಹೆಚ್ಚುವರಿ ಸೌಲಭ್ಯಗಳಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ ಎಂದು ತಿಳಿಸಿದೆ.
ಇನ್ನು ನೌಕರರ ಮರು ನೇಮಕದ ಬಳಿಕ ಅಧಿಕಾರಾವಧಿ ಎರಡು ವರ್ಷಗಳು. ಅಗತ್ಯಕ್ಕೆ ಅನುಗುಣವಾಗಿ ಅಧಿಕಾರಾವಧಿಯನ್ನು ವಿಸ್ತರಿಸುವ ಅವಕಾಶವಿದೆ. ರೈಲ್ವೇ ಅಪಘಾತಗಳು ಮತ್ತು ಉದ್ಯೋಗಿಗಳ ಮೇಲೆ ಹೆಚ್ಚಿದ ಕೆಲಸದ ಒತ್ತಡದಿಂದಾಗಿ, ಸಮಸ್ಯೆಯನ್ನು ಪರಿಹರಿಸಲು ನಿವೃತ್ತ ನೌಕರರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ.