

ತರೀಕೆರೆ: ಪಟ್ಟಣದಲ್ಲಿ ಭಾವಸಾರ ಕ್ಷತ್ರೀಯ ಸಮಾಜದಿಂದ ಏರ್ಪಡಿಸಿದ್ದ ಶ್ರೀ ವಿಠ್ಠಲ ರುಕ್ಮಾಯಿ ದೇವಿಯ 105ನೇ ದಿಂಡಿ ಉತ್ಸವ ಗುರುವಾರ ಸಂಭ್ರಮದಿಂದ ಜರುಗಿತು.
ದಿಂಡಿ ಉತ್ಸವದಲ್ಲಿ ಭಾಗವಹಿಸಿದ್ದ ನೂರಾರು ಭಾವಸಾರ ಕ್ಷತ್ರೀಯ ಸಮಾಜದವರು ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಡಿ.ಎಸ್.ಸುರೇಶ್ ದಿಂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಸಮಾಜದ ಪ್ರಮುಖರು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಿದರು.
ಸಾರ್ವಜನಿಕರ ಸಮಸ್ಯೆ ಆಲಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ರೈಲ್ವೇ ನಿಲ್ದಾಣದಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ಗಮನದಲ್ಲಿದೆ. ಈ ನಿಟ್ಟಿನಲ್ಲಿ ಪ್ಲಾಟ್‌ಾರಂ ಎತ್ತರಗೊಳಿಸಲಾಗುವುದು. ರೈಲ್ವೇ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಗೃಹಗಳ ನಿರ್ಮಾಣ ಸೇರಿ ಮೂಲ ಸೌಕರ್ಯ ಒದಗಿಸಲು ಒತ್ತು ನೀಡಲಾಗುವುದು. ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೇ ಸಚಿವ ವಿ.ಸೋಮಣ್ಣ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಹಿರಿಯ ನಾಗರಿಕ ವೇದಿಕೆ ಪದಾಧಿಕಾರಿಗಳು ಯಶವಂತಪುರ-ದಾದರ್, ಯಶವಂತಪುರ-ವಾಸ್ಕೋಡಗಾಮ ಹಾಗೂ ಯಶವಂತಪುರ-ಬಿಜಾಪುರ ರೈಲು ಗಾಡಿಗಳನ್ನು ಅಜ್ಜಂಪುರ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಬೇಕು ಎಂದು ಮನವಿ ಸಲ್ಲಿಸಿದರು.
ಮಾಜಿ ಜಿಪಂ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಮಾಜಿ ಸದಸ್ಯರಾದ ಬಿ.ಎಸ್.ಆನಂದಪ್ಪ, ಎಂ.ಕೃಷ್ಣಮೂರ್ತಿ, ಜಿಲ್ಲಾ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಿರೀಶ್ ಚವ್ಹಾಣ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಸ್.ಶಿವಾನಂದ್, ಭಾವಸಾರ ಕ್ಷತ್ರೀಯ ಸಮಾಜದ ತಾಲೂಕು ಅಧ್ಯಕ್ಷ ಎಂ.ಎನ್.ಜನಾದರ್ನರಾವ್ ಮತ್ತಿತರರಿದ್ದರು.