

ರಾಮನಗರ : ಜಿಲ್ಲೆಯ ಪ್ರಯಾಣಿಕರ ಪಾಲಿಗೆ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ರೈಲು ಪ್ರಯಾಣ ಇದೀಗ ಸಾರ್ವಜನಿಕರ ಪಾಲಿಗೆ ಸಂಕಷ್ಟವಾಗಿದೆ. ಕೋವಿಡ್‌ನಿಂದಾಗಿ ಬಂದ್ ಆಗಿದ್ದ ರೈಲು ಸಂಚಾರ ಹಂತ ಹಂತವಾಗಿ ಆರಂಭವಾಗುತ್ತಿದ್ದರೂ ರೈಲ್ವೆ ಇಲಾಖೆ ಕೋವಿಡ್ ದಿನಗಳ ನಿಯಮಗಳನ್ನೇ ಜಾರಿ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವ ಆರೋಪ ಪ್ರಯಾಣಿಕರದ್ದಾಗಿದೆ.
ಸಾವಿರಾರು ಮಂದಿಗೆ ಆಸರೆ: ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ರೈಲುಗಳು ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಭಾಗದ ಪ್ರಯಾಣಿಕರ ಪಾಲಿಗೆ ಆಸರೆಯಾಗಿದ್ದವು. ಚನ್ನಪಟ್ಟಣ ಮತ್ತು ರಾಮನಗರ ಈ ಎರಡು ನಗರಗಳಲ್ಲಿಯೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಈ ರೈಲುಗಳಲ್ಲಿ ಉದ್ಯೋಗ, ಮತ್ತಿತರ ಕೆಲಸಗಳಿಗಾಗಿ ಬೆಂಗಳೂರು, ಮೈಸೂರು, ಮಂಡ್ಯಕ್ಕೆ ಪ್ರಯಾಣ ಮಾಡುತ್ತಿದ್ದರು.
ಹೆಚ್ಚಿದ ದಟ್ಟಣೆ: ಕೋವಿಡ್‌ನಿಂದಾಗಿ ಈ ಎರಡೂ ನಗರಗಳ ನಡುವೆ ಸಂಚರಿಸುತ್ತಿದ್ದ ರೈಲುಗಳು ಬಂದ್ ಆಗಿದ್ದವು. ಆದರೆ ನಂತರ ಕೋವಿಡ್ ನಿಯಮ ಸಡಿಸಿಲಿ ಕೆಲವು ರೈಲುಗಳ ಸಂಚಾರ ಆರಂಭಗೊಂಡಿದ್ದರು ಈ ಭಾಗದ ಜನರಿಗೆ ಬೇಕಾದ ಪ್ಯಾಸೆಂಜರ್ ರೈಲುಗಳ ಸಂಚಾರ ಹೆಚ್ಚಿಗೆ ಆಗಲೇ ಇಲ್ಲ.
ಈ ಮೊದಲು 3-4 ಇದ್ದ ಪ್ಯಾಸೆಂಜರ್ ರೈಲುಗಳ ಸಂಖ್ಯೆ ಈಗ ಒಂದಕ್ಕೆ ಇಳಿದಿದೆ. ಇದರಿಂದಾಗ ಈ ರೈಲಿಗೆ ಪ್ರಯಾಣಿಕರ ಒತ್ತಡ ಹೆಚ್ಚಿದೆ. ಅಲ್ಲದೆ, ಚನ್ನಪಟ್ಟಣದಿಂದ ಬೆಂಗಳೂರಿಗೆ ಕೇವಲ 20 ರೂ. ಇರುವುದರಿಂದ ಬಡವರೂ ಸಹ ಪ್ಯಾಸೆಂಜರ್ ರೈಲಿನಲ್ಲೇ ಪ್ರಯಾಣಿಸುತ್ತಿದ್ದರು. ಈಗ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಾರಣ ಅನಿವಾರ್ಯವಾಗಿ ಹೆಚ್ಚು ಪ್ರಯಾಣ ದರವಿರುವ ರೈಲಿನಲ್ಲಿ, ಇಲ್ಲವೇ ಬಸ್‌ಗಳಲ್ಲಿ ಪ್ರಯಾಣಿಸಬೇಕಾಗಿದೆ.
ಟಿಕೆಟ್ ಆನ್‌ಲೈನ್: ಇನ್ನು ಪ್ರತಿದಿನ ಓಡಾಟಕ್ಕೂ ಆನ್‌ಲೈನ್ ಮೂಲಕವೇ ಟಿಕೆಟ್ ಬುಕ್ ಮಾಡಬೇಕಿದೆ. ಪ್ಯಾಸೆಂಜರ್ ರೈಲಿಗೆ ಪ್ರಯಾಣಿಸುವ ಅರ್ಧ ಗಂಟೆ ಮೊದಲು ಮಾತ್ರ ಕೌಂಟರ್‌ಗಳಲ್ಲಿ ಟಿಕೆಟ್ ನೀಡಲಾಗುತ್ತದೆ. ಉಳಿದಂತೆ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣ ಮಾಡಬೇಕಾದರೆ ಒಂದು ದಿನ ಮೊದಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬೇಕು. ಇದು ವಿದ್ಯಾವಂತರು ಹಾಗೂ ಮೊಬೈಲ್ ಬಳಸುವವರಿಗೆ ಮಾತ್ರ ಸಾಧ್ಯ. ಅನಕ್ಷರಸ್ಥರಿಗೆ ಇದು ನುಂಗಲಾರದ ತುತ್ತಾಗಿದೆ.
ಮತ್ತಷ್ಟು ರೈಲು ಬಿಡಿ: ಬೆಂಗಳೂರು - ಮೈಸೂರು ನಡುವೆ ಹಿಂದೆ ಓಡಾಡುತ್ತಿದ್ದಂತೆ ಹೆಚ್ಚಿನ ರೈಲುಗಳನ್ನು ಓಡಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಜತೆಗೆ ಪ್ರತಿನಿತ್ಯ ರೈಲು ಬಳಕೆ ಮಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ಪಾಸ್ ನೀಡಬೇಕು ಹಾಗೂ ಎಕ್ಸ್‌ಪ್ರೆಸ್ ರೈಲುಗಳಿಗೂ ಕೌಂಟರ್‌ನಲ್ಲೇ ಟಿಕೆಟ್ ನೀಡುವ ವ್ಯವಸ್ಥೆ ಮಾಡಬೇಕು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.
ಪಾಸ್ ಸಹ ಬಂದ್ ಈ ಎರಡೂ ನಗರಗಳ ನಡುವೆ ಸಂಚರಿಸುವ ಬಹುತೇಕ ಮಂದಿ ಪಾಸ್ ಹೊಂದಿದ್ದರು. ಅತೀ ಕಡಿಮೆ ಖರ್ಚಿನಲ್ಲಿ ತಿಂಗಳು ಪೂರ್ತಿ ಪ್ರಯಾಣವನ್ನು ಮುಗಿಸಿಕೊಳ್ಳುತ್ತಿದ್ದರು. ಕರೊನಾ ನಂತರ ಪಾಸ್ ವಿತರಣೆಯನ್ನೂ ರೈಲ್ವೆ ಇಲಾಖೆ ಸ್ಥಗಿತಗೊಳಿಸಿದೆ. ಇದರಿಂದಾಗಿ ಪ್ರತಿದಿನ ಟಿಕೆಟ್ ಪಡದೇ ಪ್ರಯಾಣ ಮಾಡಬೇಕಿದೆ. ಇದು ಉದ್ಯೋಗಿಗಳ ಪಾಲಿಗೆ ಸಂಕಷ್ಟ ತಂದೊಡ್ಡಿದೆ.
ರೈಲುಗಳು ನಮ್ಮ ಭಾಗದ ಜನರ ಜೀವನಾಡಿಗಳಾಗಿವೆ. ಆದರೆ ಕೋವಿಡ್ ನಂತರ ರೈಲ್ವೆ ಇಲಾಖೆ ಸಾಕಷ್ಟು ಬದಲಾವಣೆಗಳನ್ನು ತಂದಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಹಿಂದಿನಂತೆ ರೈಲುಗಳ ಸಂಚಾರ, ಪಾಸ್ ವಿತರಣೆ ಹಾಗೂ ಕೌಂಟರ್‌ಗಳಲ್ಲಿಯೇ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಸುಬ್ಬಣ್ಣ ಅಧ್ಯಕ್ಷ, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ