

ನವದೆಹಲಿ: ರೈಲ್ವೆ ಮಂಡಳಿಯ ಪುನಾರಚನೆಗೆ ಕೊನೆಗೂ ಕೇಂದ್ರ ಸಂಪುಟ ಸಮಿತಿ ಸಮ್ಮತಿ ನೀಡಿದೆ. ಮಂಡಳಿಯ ಪ್ರಪ್ರಥಮ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ವಿನೋದ್ಕುಮಾರ್ ಯಾದವ್ ನೇಮಕಗೊಂಡಿದ್ದಾರೆ.
ವಿ.ಕೆ. ಯಾದವ್ 1980ರ ಭಾರತೀಯ ರೈಲ್ವೆ ಎಲೆಕ್ಟ್ರಿಕಲ್ ಇಂಜಿನಿಯರ್ಸ್ ಶ್ರೇಣಿಯ ಅಧಿಕಾರಿಯಾಗಿದ್ದಾರೆ. ಹಾಲಿ ರೈಲ್ವೆ ಮಂಡಳಿಯ ಅಧ್ಯಕ್ಷರೂ ಆಗಿದ್ದರು.
ಏನಿದು ರೈಲ್ವೆ ಮಂಡಳಿ ಪುನಾರಚನೆ?: ರೈಲ್ವೆಯ ಚಟುವಟಿಕೆಗಳ ಆಧಾರದಲ್ಲಿ ಅದರ ಮುಖ್ಯಸ್ಥರು ಹಾಗೂ ನಾಲ್ಕು ಸದಸ್ಯನ್ನೊಳಗೊಂಡ ಶ್ರೇಣೀಕೃತ ವ್ಯವಸ್ಥೆ ಜಾರಿಗೊಳಿಸಲು 2019ರಲ್ಲಿಯೇ ಸಂಪುಟ ಒಪ್ಪಿಗೆ ನೀಡಿತ್ತು. ಅದರಂತೆ ಮೂಲಸೌಕರ್ಯ, ನಿರ್ವಹಣೆ, ಬಿಜಿನೆಸ್ ಡೆವಲಪ್ಮೆಂಟ್, ರೋಲಿಂಗ್ ಸ್ಟಾಕ್ ಹಾಗೂ ಹಣಕಾಸು ವಿಭಾಗವನ್ನು ಒಬ್ಬೊಬ್ಬರು ಮುನ್ನಡೆಸಲಿದ್ದಾರೆ. ಅಂದರೆ ಮಂಡಳಿಯು ಕಾರ್ಪೋರೇಟ್ ಕಂಪನಿಯ ಸ್ವರೂಪ ಹೊಂದಿದಂತಾಗಲಿದೆ.
ಕೇಂದ್ರ ಸರ್ಕಾರವು ಮುಂದಿನ 12 ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿಗಾಗಿ 5 ಲಕ್ಷ ಕೋಟಿ ರೂ.ಗಳ ಯೋಜನೆ ರೂಪಿಸಿದೆ. ಸುರಕ್ಷತೆ, ವೇಗ ಹಾಗೂ ಸೇವೆ ಹೆಚ್ಚಳದ ಬಗ್ಗೆ ಯೋಜನೆಗಳಿವೆ. ತ್ವರಿತವಾಗಿ ನಿರ್ಣಯ ಕೈಗೊಳ್ಳುವ ವ್ಯವಸ್ಥೆ ರೂಪಿಸಿದಲ್ಲಿ ಈ ಎಲ್ಲ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಸಾಧ್ಯವಾಗಲಿದೆ ಎನ್ನುವುದು ಇದರ ಹಿಂದಿನ ಉದ್ದೇಶವಾಗಿದೆ.
ಪ್ರಸ್ತುತ ರೈಲ್ವೆಯಲ್ಲಿರುವ ಇಲಾಖಾವಾರು ವ್ಯವಸ್ಥೆ ಅದಕ್ಷವಾಗಿದೆ, ಅಧಿಕಾರಕ್ಕೆ ಒಳಜಗಳ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಜತೆಗೆ ನಿರ್ಣಯ ತೆಗೆದುಕೊಳ್ಳಲು ವಿಳಂಬವಾಗುತ್ತಿರುವುದು ಅಭಿವೃದ್ಧಿಯನ್ನು ಕುಂಠಿತಗೊಳಿಸಿವೆ ಎಂಬ ದೂರುಗಳು ವ್ಯಾಪಕವಾಘಿವೆ. ಈ ಕಾರಣಕ್ಕೆ ಆಡಳಿತಾತ್ಮಕ ಸ್ವರೂಪವನ್ನು ಸಂಪೂರ್ಣ ಬದಲಾವಣೆ ಮಾಡಲಾಗುತ್ತಿದೆ.
ಅದರಂತೆ ರೈಲ್ವೆಯಲ್ಲಿರುವ ಎಂಟು ಗ್ರೂಪ್ ಎ ಸೇವೆಗಳನ್ನು ಒಂದುಗೂಡಿಸಿ ಇಂಡಿಯನ್ ರೈಲ್ವೆ ಮ್ಯಾನೇಜ್ಮೆಂಟ್ ಸರ್ವೀಸ್ (ಐಆರ್ಎಂಎಸ್) ಎಂಬ ಕೇಂದ್ರೀಯ ಸೇವೆ ರೂಪಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಯಾದವ್ ಜತೆಗೆ ಮಂಡಳಿಗೆ ಪ್ರದೀಪ್ಕುಮಾರ್ (ಮೂಲಸೌಕರ್ಯ), ಪಿ.ಸಿ. ಶರ್ಮ (ಟ್ರ್ಯಾಕ್ಷನ್ ಆ್ಯಂಡ್ ರೋಲಿಂಗ್ ಸ್ಟಾಕ್), ಪಿ.ಎಸ್. ಮಿಶ್ರಾ (ನಿರ್ವಹಣೆ ಹಾಗೂ ವಹಿವಾಟು ಅಭಿವೃದ್ಧಿ), ಮಂಜುಳಾ ರಂಗರಾಜನ್ ಹಣಕಾಸು ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.