ಬಿಟ್‌ಕಾಯಿನ್ ಹಗರಣದ ಆರೋಪಿಗಳ ನಿವಾಸಗಳ ಮೇಲೆ ದಾಳಿ

Bit Coin (1)
Published on

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ಪ್ರಮುಖ ಆರೋಪಿ ಹಾಗೂ ಅಂತಾರಾಷ್ಟ್ರೀಯ ಹ್ಯಾಕರ್ಸ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿ ಮೂವರು ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದು ಮಂಗಳವಾರ ಮುಂಜಾನೆ ೬ ಗಂಟೆಯಿಂದ ಜಯನಗರದಲ್ಲಿರುವ ಶ್ರೀಕೃಷ್ಣನ ಮನೆ, ಕೃತ್ಯದಲ್ಲಿ ಆತನಿಗೆ ಸಹಕಾರ ನೀಡಿದ ಆರೋಪದ ಮೇಲೆ ಸಂಜಯನಗರ ನಿವಾಸಿ ಸುನೀಶ್ ಹೆಗ್ಡೆ, ಸದಾಶಿವನಗರದಲ್ಲಿರುವ ಪ್ರಸಿದ್ಧ್ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಕೆಲ ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ಡಾರ್ಕ್‌ವೆಬ್ ಮೂಲಕ ಹೈಡ್ರೋ ಗಾಂಜಾ ತರಿಸಿ ಸೇವನೆ ಮಾಡುತ್ತಿದ್ದ ಆರೋಪದಡಿ ಶ್ರೀಕಿ ಹಾಗೂ ಇತರರ ವಿರುದ್ಧ ೨೦೨೦ರಲ್ಲಿ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್ ವೆಬ್‌ಸೈಟ್ ಹಾಗೂ ಅಂತಾರಾಷ್ಟ್ರೀಯ ಗೇಮಿಂಗ್ ಆ್ಯಪ್‌ಗಳನ್ನು ಹ್ಯಾಕ್ ಮಾಡಿ ಬಿಟ್‌ಕಾಯಿನ್ ಮೂಲಕ ಹಣಲೂಟಿ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಸಿಸಿಬಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ, ಆರೋಪಪಟ್ಟಿ ಕೂಡ ಸಲ್ಲಿಸಿದ್ದರು.
ಆದರೆ, ಬಿಟ್‌ಕಾಯಿನ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಕೋಟ್ಯಂತರ ರೂ. ವಂಚಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಟ್‌ಕಾಯಿನ್ ಕೇಸ್ ಅನ್ನು ಸಿಐಡಿಗೆ ವಹಿಸಿದ್ದು, ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು.
ತನಿಖೆ ಕೈಗೊಂಡ ಎಸ್‌ಐಟಿ ಆರೋಪಿ ಶ್ರೀಕೃಷ್ಣ ಹಾಗೂ ಸಿಸಿಬಿಯ ಅಂದಿನ ತನಿಖಾಧಿಕಾರಿ ಸೇರಿ ಕೆಲ ಅಧಿಕಾರಿಗಳ ವಿರುದ್ಧ ಕಳೆದ ತಿಂಗಳು ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ಇತ್ತೀಚೆಗೆ ಶ್ರೀಕೃಷ್ಣನನ್ನು ವಿಚಾರಣೆ ನಡೆಸಲಾಗಿತ್ತು. ಇದೀಗ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net