ಅಕ್ರಮ ಕಾಲ್​ಸೆಂಟರ್ ಮೇಲೆ ರೇಡ್

callcentre
Published on

ನವದೆಹಲಿ: ಅಕ್ರಮವಾಗಿ ಕಾಲ್ ಸೆಂಟರ್ ನಡೆಸುವ ಮೂಲಕ ಅಮೆರಿಕ ಪ್ರಜೆಗಳಿಗೆ ಸುಮಾರು 130 ಕೋಟಿ ರೂ. ವಂಚಿಸಿದ್ದ ಹಲವು ವ್ಯಕ್ತಿಗಳ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಆಸ್ತಿಯನ್ನು ವಶಕ್ಕೆ ಪಡೆದಿದೆ.

ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಕಾಯ್ಡೆ (ಪಿಎಂಎಲ್​ಎ), 2002 ರ ಅಡಿ ಆಗಸ್ಟ್ 20 ರಂದು ಗುರುಗ್ರಾಮ ಮತ್ತು ದೆಹಲಿಯ 7 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ನೋಯ್ಡಾ ಮತ್ತು ಗುರುಗ್ರಾಮದಲ್ಲಿ ಅಕ್ರಮ ಕಾಲ್ ಸೆಂಟರ್ ನಡೆಸುವ ಮೂಲಕ ಅರ್ಜುನ್ ಗುಲಾಟಿ, ದಿವ್ಯಾಂಶ್ ಗೋಯೆಲ್ ಮತ್ತು ಅಭಿನವ್ ಕಾರ್ಲಾ ಸೇರಿದಂತೆ ಇತರರು ತಾಂತ್ರಿಕ ಬೆಂಬಲ ನೀಡುವ ನೆಪದಲ್ಲಿ ಅಮೆರಿಕದ ಪ್ರಜೆಗಳಿಗೆ ವಂಚಿಸಿದ್ದರು ಎಂದು ಇಡಿ ತಿಳಿಸಿದೆ. ಆರೊಪಿಗಳು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಪ್ರವೇಶ ಪಡೆದು ಅಲ್ಲಿಂದ ಹಲವು ವಿದೇಶಿ ಬ್ಯಾಂಕ್​ಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಬಳಿಕ ಆ ಹಣವನ್ನು ತಮ್ಮ ಭಾರತದ ಅಕೌಂಟ್​ಗಳಿಗೆ ವರ್ಗಾಯಿಸುತ್ತಿದ್ದರು. ಇದಕ್ಕಾಗಿ ಸುಮಾರು 200 ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್​ಗಳನ್ನು ಬಳಸುತ್ತಿದ್ದರು. 2022ರ ನವೆಂಬರ್ ನಿಂದ 2024ರ ಏಪ್ರಿಲ್​ವರೆಗೆ ಇವರು ಸುಮಾರು 15 ಮಿಲಿಯನ್ ಡಾಲರ್ (130 ಕೋಟಿ ರೂ.) ಗೂ ಹೆಚ್ಚಿನ ವಂಚನೆ ನಡೆಸಿದ್ದರು ಎಂದು ಇಡಿ ತಿಳಿಸಿದೆ. ಆರೋಪಿಗಳು ವಂಚನೆಯ ಹಣದಿಂದ ಐಷಾರಾಮಿ ಮನೆಗಳು ಸೇರಿದಂತೆ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ್ದರು. ಇವರಿಗೆ ಸೇರಿದ 30 ಬ್ಯಾಂಕ್ ಖಾತೆಗಳು, ದುಬಾರಿ ವಾಚ್​ಗಳು ಮತ್ತು 8 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net