ಧಾರ್ಮಿಕ ಕೇಂದ್ರಗಳು ಮುಜರಾಯಿ ಇಲಾಖೆಯಿಂದ ಮುಕ್ತವಾಗಬೇಕು: ಶ್ರೀ ಸುಬುಧೇಂದ್ರ ತೀರ್ಥರು

IMG_20240923_141712
Published on

ರಾಯಚೂರು: ಭಕ್ತರ ಶ್ರದ್ಧ ಕೇಂದ್ರವಾದ ತಿರುಪತಿಯಲ್ಲಿ ಪ್ರಸಾದದಲ್ಲಿ ಕಲಬೆರಕೆಯಾಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಈ ಘಟನೆಯ ಕುರಿತು ಇನ್ನೂ ಹೆಚ್ಚಿನ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಗೋವಿಂದ ಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು.
ದೇವಸ್ಥಾನಗಳು, ಮಠಮಾನ್ಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮುಜರಾಯಿ ಇಲಾಖೆಯಿಂದ ಮುಕ್ತವಾಗಬೇಕು. ಸ್ವಾತಂತ್ರೃ ಪೂರ್ವದಲ್ಲಿ ಆಯಾ ಊರಿನ ದೇವಸ್ಥಾನಗಳು ಮಠಮಾನ್ಯಗಳು ಆಯಾ ಭಕ್ತರು, ಶಿಷ್ಯರು ಹಾಗೂ ಮುಖಂಡರ ನೇತೃತ್ವದಲ್ಲಿ ನಿರ್ವಹಣೆ ಮತ್ತು ವ್ಯವಸ್ಥೆಗಳು ನಡೆಯುತ್ತಿದ್ದವು ಆದರೆ ಲೌಕಿಕ ಕಾನೂನುಗಳಿಂದ ಸರ್ಕಾರದ ವಶಕ್ಕೆ ಸೇರಿಕೊಂಡು ತೊಂದರೆಗಳಾಗುತ್ತಿವೆ ಎಂದರು.

ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಕಲಬೆರಕೆಯಾಗಿರುವ ವಸ್ತುಗಳ ಬಗ್ಗೆ ಅಲ್ಲಿನ ಅಧಿಕಾರಿಗಳು, ವಸ್ತುಗಳನ್ನು ಖರೀದಿಸುವವರು ಪರಿಶೀಲಿಸಬೇಕು. ಪ್ರಸಾದದಲ್ಲಿ ಕಲಬೆರಕೆಯಾಗಿದ್ದರೆ ಶುದ್ಧಿಯಾಗಬೇಕಿದೆ. ತಿರುಪತಿಯ ಪ್ರಸಾದದಲ್ಲಿ ಕಲಬೆರಕೆಯಾದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಯಾರು ಕಾರಣರು ಮತ್ತು ಯಾವಾಗಿನಿಂದ ಈ ಕಲಬೆರಕೆಯಾಗಿದೆ ಎಂಬುವುದರ ಬಗ್ಗೆ ತನಿಖೆಯ ನಡೆಸಬೇಕು ಎಂದು ಒತ್ತಾಯಿಸಿದರು.

ಧಾರ್ಮಿಕ ಕ್ಷೇತ್ರಗಳಲ್ಲಿ ಈ ಘಟನೆಗಳು ನಡೆಯಬಾರದು. ಇದು ಖಂಡನೀಯ. ವಿವಿಧ ಮಠಗಳ ಮಠಾಧೀಶರ ಚರ್ಚೆಗಳು ನಡೆಯುತ್ತವೆ ಅದರಲ್ಲಿ ಭಾಗವಹಿಸುವ ಜತೆಗೆ ಶುದ್ಧಿಕರಣದ ಸಂದರ್ಭದಲ್ಲಿ ಇರುವುದಾಗಿ ತಿಳಿಸಿದರು.

ರಾಘವೇಂದ್ರ ಸ್ವಾಮಿ ಮಠದ ರಾಯರ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ತಿರುಪತಿಯಿಂದ ತರುವ ಶೇಷವಸ್ತ್ರವನ್ನೇ ಪ್ರಸಾದವನ್ನಾಗಿ ಸ್ವೀಕರಿಸಲಾಗುತ್ತಿತ್ತು. ಶೇಷವಸ್ತ್ರವನ್ನೇ ರಾಯರಿಗೆ ಪ್ರಸಾದ ರೂಪದಲ್ಲಿ ಸಮರ್ಪಣೆ ಮಾಡಲಾಗುತ್ತದೆ. ಮಠದಲ್ಲಿ ತಯಾರಿಸುವ ಪರಿಮಳ ಪ್ರಸಾದಕ್ಕೆ ವಿಜಯಾ ಡೇರಿಯ ತುಪ್ಪವನ್ನು ಬಳಸಲಾಗುತ್ತದೆ. ಆಹಾರ ಗುಣಮಟ್ಟದ ಪರೀಕ್ಷೆಯ ವರದಿ ಹಾಗೂ ಪ್ರಮಾಣಪತ್ರ ಪಡೆದುಕೊಳ್ಳಲಾಗಿದೆ ಎಂದು ಸುಬುಧೇಂದ್ರ ತೀರ್ಥರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net