

ರಾಯಚೂರು: ಕಾಂಗ್ರೆಸ್ ಸರ್ಕಾರ ನಾಡಿನ ರೈತರಿಗೆ ಬಡವರಿಗೆ ಮೋಸ ಮಾಡುವಂತಹ ಕೆಲಸ ಮಾಡುತ್ತಿದೆ. ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುದಾನವೇ ನೀಡುತ್ತಿಲ್ಲ. ಅನುದಾನವಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ರಾಜ್ಯದ ಆಡಳಿತ ಪಕ್ಷದ ಶಾಸಕ ರಾಜು ಕಾಗಿ ಹೇಳುತ್ತಾರೆ. ಗ್ಯಾರಂಟಿಗಳಿಂದ ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರವಿದೆ ಎಂದರು.
ಸುದ್ದಿಗೋಷ್ಠಿಯನ್ನು ವೀಕ್ಷಿಸಲು ಕೆಳಗೆ ಕ್ಲಿಕ್ ಮಾಡಿ: https://youtu.be/za6xoGkrblQ?si=3wS5rwf0DQBsYDao
ಮುಡಾ, ಹಗರಣವೇ ಅಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ, ರಾತ್ರೋ ರಾತ್ರಿ ಅವರ ಧರ್ಮಪತ್ನಿಯೇ 14 ನಿವೇಶನಗಳನ್ನು ಹಿಂದುರಿಗಿಸಿದ್ದಾರೆ. 14 ನಿವೇಶನದಲ್ಲಿ ಸಂಪೂರ್ಣ ಅಕ್ರಮ ನಡೆದಿರುವ ಬಗ್ಗೆ ವರದಿ ಬಂದಿದೆ. ಜತೆಗೆ 700 ಕೋಟಿ ರೂ.ಗೂ ಹೆಚ್ಚಿನ ಭ್ರಷ್ಟಾಚಾರ ಮುಡಾದಲ್ಲಿ ನಡೆದಿದೆ ಎಂದರು.
ಧರಿದ್ರ ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾವುದೇ ಜನ ಕಲ್ಯಾಣವಾಗುತ್ತಿಲ್ಲ. ಆದರೆ ಕಾಂಗ್ರೆಸ್ಸಿಗರು ಹಾಸನದಲ್ಲಿ ಜನ ಕಲ್ಯಾಣ ಯಾತ್ರೆಯನ್ನು ಮಾಡುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲು ತಂದಿದ್ದ ಗುದ್ದಲಿಗಳು ಮನೆ ಸೇರಿಕೊಂಡಿವೆ ಎಂದರು.
ಅಧಿಕಾರದ ದರ್ಪದಿಂದ ಮೆರೆಯುತ್ತಿರುವ ಸಿಎಂ ಹಾಗೂ ಮಂತ್ರಿಮಂಡಲಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ. ಈಗಾಗಲೇ ಸಿಎಂ ಕುರ್ಚಿಗೆ ಪೈಪೋಟಿ ನಡೆದಿದೆ. ಯಾವ ಹಂತಕ್ಕೆ ಬೇಕಾದರೂ ಹೋಗಬಹುದು. ಶಾಸಕರು ಜತೆಗಿಲ್ಲದಿದ್ದರೂ ಮುಖ್ಯಮಂತ್ರಿಯಾಗಬೇಕೆಂಬ ಹಠ ಡಿ.ಕೆ.ಶಿವಕುಮಾರ ಅವರಲ್ಲಿದ್ದು, ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ರಾಜ್ಯದ ಬಿಜೆಪಿ ಪಕ್ಷದ ಕೆಲವು ಮುಖಂಡರ ನಡುವಳಿಕೆ ಹಾಗೂ ನನ್ನ ನಡುವಳಿಕೆ ಬಗ್ಗೆ ಕಾರ್ಯಕರ್ತರಲ್ಲಿ ಹಾಗೂ ಜನರಲ್ಲಿ ಗೊಂದಲಗಳಿದ್ದು, ಬಿಜೆಪಿ ಕಾರ್ಯಕರ್ತರು ಹಗಲು ರಾತ್ರಿ ಪಕ್ಷವನ್ನು ಸಂಘಟಿಸುವ ಕೆಲಸದಲ್ಲಿದ್ದಾರೆ. ಕೇಂದ್ರದ ವರಿಷ್ಠರು ಇವೆಲ್ಲವನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಫೇಲ್ ಮಾಡುವ ಕುರಿತು ಕೇಂದ್ರ ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ ಎಂಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜವಾಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕುಣಿಯಲು ಬಾರದೇ ನೆಲ ಡೊಂಕು ಎನ್ನುತ್ತಿದ್ದಾರೆ. ಯೋಜನೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಈಗ ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರು.