ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದ ರಾಹುಲ್​-ಪ್ರಿಯಾಂಕಾ..

Priyanka Gandhi
Published on

ಉತ್ತರಪ್ರದೇಶ: ಕಾಂಗ್ರೆಸ್​ ನಾಯಕರಾಗಿರುವ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅಂತೂ ಇಂತೂ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಕೊನೆಗೂ ಹತ್ರಾಸ್​ಗೆ ತಲುಪಿದ್ದಾರೆ.

ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಮನೆಗೆ ಭೇಟಿ ನೀಡುವ ಸಲುವಾಗಿ ಬೆಳಗ್ಗೆ ನವದೆಹಲಿಯಿಂದ ಹೊರಟಿದ್ದ ಇವರನ್ನು ಮಾರ್ಗಮಧ್ಯೆ ತಡೆಯುವ ಪ್ರಯತ್ನ ನಡೆದಿತ್ತು. ಉತ್ತರ ಪ್ರದೇಶದಲ್ಲಿ ಮಧ್ಯಾಹ್ನ ರಾಹುಲ್​-ಪ್ರಿಯಾಂಕಾ ಹಾಗೂ ಕಾಂಗ್ರೆಸ್​ನ ಇತರ ಕೆಲವು ನಾಯಕರಿದ್ದ ವಾಹನವನ್ನು ಪೊಲೀಸರು ತಡೆಹಿಡಿದಿದ್ದರು. ಪರಿಣಾಮ ಸುಮಾರು ಹತ್ತು ಕಿ.ಮೀ.ನಷ್ಟು ದೂರ ಅಂದಾಜು ಒಂದು ಗಂಟೆ ಟ್ರಾಫಿಕ್​ ಜಾಮ್​ ಆಗಿತ್ತು.

ಆದರೆ ಪಟ್ಟು ಬಿಡದ ರಾಹುಲ್-ಪ್ರಿಯಾಂಕಾ ಹಾಗೂ ಇನ್ನು ಮೂವರು ಸೇರಿ ಒಟ್ಟು ಐವರಷ್ಟೇ ಸಂತ್ರಸ್ತೆಯ ಮನೆಗೆ ತೆರಳಲು ಪೊಲೀಸರು ಅನುವು ಮಾಡಿಕೊಟ್ಟರು. 'ಏನೇ ಆದರೂ ಹತ್ರಾಸ್​ಗೆ ಹೋಗೇ ಹೋಗ್ತೀನಿ' ಎಂದು ಬೆಳಗ್ಗೆ ನವದೆಹಲಿಯಿಂದ ಹೊರಡುವಾಗಲೇ ಪ್ರಿಯಾಂಕಾ ಹೇಳಿದ್ದರು.

ರಾಹುಲ್​ ಹಾಗೂ ಪ್ರಿಯಾಂಕಾ ಗುರುವಾರವೇ ಹತ್ರಾಸ್​ಗೆ ಭೇಟಿ ನೀಡಲು ಯತ್ನಿಸಿದ್ದರೂ ಪೊಲೀಸರು ಅವರಿಗೆ ಅವಕಾಶ ಕೊಟ್ಟಿರಲಿಲ್ಲ. ವಾಹನ ತಡೆದರೂ ಕಾಲ್ನಡಿಗೆಯಲ್ಲಿ ತೆರಳಿದ ರಾಹುಲ್​ಗೆ ಪೊಲೀಸರು ಮತ್ತೆ ತಡೆವೊಡ್ಡಿದ್ದರು. ಈ ಸಂದರ್ಭ ತಳ್ಳಾಟ ನಡೆದಿದ್ದು, ರಾಹುಲ್​-ಪ್ರಿಯಾಂಕಾ ಅಂದು ವಾಪಸ್​ ಆಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net