

ನವದೆಹಲಿ: ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬೆನ್ನಲ್ಲೇ ರಾಜಸ್ಥಾನದಲ್ಲಿ ಹಿರಿಯ ನಾಯಕ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕುಚಿರ್ ಅಲುಗಾಡಿಸುವ ಕೆಲಸ ಮತ್ತೆ ಶುರುವಾಗಿದೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೋದರಿ ಪ್ರಿಯಾಂಕಾ ವಾದ್ರಾರನ್ನು ಭೇಟಿ ಮಾಡಿದ್ದ ರಾಜಸ್ಥಾನ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್, ಶುಕ್ರವಾರದಂದು ಮತ್ತೊಮ್ಮೆ ಇಬ್ಬರನ್ನೂ ಭೇಟಿ ಮಾಡಿ, 45 ನಿಮಿಷಗಳ ಕಾಲ ಮಾತುಕತ ನಡೆಸಿದ್ದಾರೆ.
ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ನೀಡಬೇಕು ಎಂಬ ಒತ್ತಡ ಮೊದಲಿನಿಂದ ಇದ್ದರೂ, ಈ ಬಾರಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ರಾಹುಲ್&ಪ್ರಿಯಾಂಕಾರನ್ನು ಪೈಲಟ್ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ. ಸಂಪುಟ ವಿಸ್ತರಣೆ ವೇಳೆ ತಮ್ಮ ಬೆಂಬಲಿಗ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪೈಲಟ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವುದರಿಂದಲೇ ಸಿಎಂ ಅಶೋಕ್ ಗೆಹ್ಲೋಟ್ ವಿಸ್ತರಣೆ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಇದ್ದಾರೆ.
ಏತನ್ಮಧ್ಯೆ, ಮುಂದಿನ ವರ್ಷ ಗುಜರಾತ್ ಚುನಾವಣೆ ನಡೆಯಲಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಸಚಿನರನ್ನು ಗುಜರಾತ್ಗೆ ಕಳುಹಿಸಲು ರಾಹುಲ್ ಉತ್ಸುಕರಾಗಿದ್ದಾರೆ. ಆದರೆ, ಸಂಪುಟ ವಿಸ್ತರಣೆಯಲ್ಲಿ ಬೆಂಬಲಿಗರಿಗೆ ಮಹತ್ವ ಸಿಕ್ಕರೆ ಮಾತ್ರ ಜವಾಬ್ದಾರಿ ವಹಿಸಿಕೊಳ್ಳುವೆ ಎಂದು ಪೈಲಟ್ ತಿಳಿಸಿದ್ದಾರೆ.