

B K Hariprasad: ರಾಹುಲ್ ಗಾಂಧಿ ದೇಶ ವಿರೋಧಿಗಳೊಂದಿಗೆ ಸಮನ್ವಯತೆ ಮಾಡ್ತಿದ್ದು, ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ ಎಂಬ ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಮಲೈ ತಿನ್ನಲು ಕಾಂಗ್ರೆಸ್ನಿಂದ ಓಡಿ ಹೋದವರು ಎಂದು ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಇಂದು (ಆಗಸ್ಟ್ 24) ಎಎನ್ಐ ಜೊತೆ ಮಾತನಾಡಿರುವ ಬಿ.ಕೆ.ಹರಿಪ್ರಸಾದ್, ಕಿರಣ್ ರಿಜಿಜು ಅವರನ್ನು ಗುರುತಿಸಿದ್ದು ಕಾಂಗ್ರೆಸ್, ಇಲ್ಲ ಅಂದ್ರೆ ಯಾರೂ ಅವರನ್ನು ನೋಡುತ್ತಿರಲಿಲ್ಲ. ಅರುಣಾಚಲ ಪ್ರದೇಶದಲ್ಲಿ ಚೀನಿಯರು ಹಳ್ಳಿಗಳನ್ನು ನಿರ್ಮಿಸಿದ ಬಗ್ಗೆ ಮಾತನಾಡಲು ಹೇಳಿ ಎಂದು ಕಿಡಿಕಾರಿದರು.
ದಿಕ್ಕು ತಪ್ಪಿಸುವ ರಾಜಕೀಯ ಮಾಡುತ್ತಿದ್ದಾರೆ. ಇಂದು ಇಡೀ ದೇಶವೇ ಮತ ಕಳ್ಳತನದ ಬಗ್ಗೆ ಮಾತನಾಡುತ್ತಿದೆ. ಬಿಜೆಪಿಯಲ್ಲಿ ಯಾರಿಗೂ ಯೋಚಿಸುವ ಮತ್ತು ಮಾತನಾಡುವ ಹಕ್ಕಿಲ್ಲ. ಆದರೆ ಕಾಂಗ್ರೆಸ್ನಲ್ಲಿ ಎಲ್ಲರಿಗೂ ಕಾಂಗ್ರೆಸ್ನೊಳಗೆ ಯೋಚಿಸುವ ಮತ್ತು ಮಾತನಾಡುವ ಹಕ್ಕಿದೆ. ನಮ್ಮ ಖರ್ಗೆ ಜಿ ಮತ್ತು ರಾಹುಲ್ ಗಾಂಧಿ ಜಿ ಎಲ್ಲರನ್ನೂ ಕರೆದುಕೊಂಡು ಹೋಗಿ ಕಾಂಗ್ರೆಸ್ ಅನ್ನು ನಡೆಸುತ್ತಿದ್ದಾರೆ" ಎಂದು ಹೇಳಿದರು.
ಸಚಿವ ಕಿರಣ್ ರಿಜಿಜು ಹೇಳಿದ್ದೇನು?
ಎಎನ್ಐ ಜೊತೆ ಮಾತನಾಡಿದ್ದ ಕಿರಣ್ ರಿಜಿಜು, ರಾಹುಲ್ ಗಾಂಧಿ ತುಂಬಾ ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದ್ದಾರೆ. ಭಾರತ ಸರ್ಕಾರವನ್ನು ಅಸ್ಥಿರಗೊಳಿಸಲು ಒಂದು ಟ್ರಿಲಿಯನ್ ಡಾಲರ್ಗಳನ್ನು ಇಡಲಾಗಿದೆ ಎಂದು ಜಾರ್ಜ್ ಸೊರೊಸ್ ಹೇಳುತ್ತಾರೆ. ಕೆನಡಾ, ಯುಎಸ್, ಯುಕೆ ಮತ್ತು ಅನೇಕ ಎಡಪಂಥೀಯ ಸಂಘಟನೆಗಳಲ್ಲಿ ಕುಳಿತಿರುವ ಭಾರತ ವಿರೋಧಿ ಖಲಿಸ್ತಾನ್ ಪಡೆ ದೇಶದ ವಿರುದ್ಧ ಕೆಲಸ ಮಾಡಲು ಪಿತೂರಿ ನಡೆಸುತ್ತಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅವರೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಯಾರೂ ದೇಶ ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದಿದ್ದರು.
ಕಾಂಗ್ರೆಸ್ ಪಕ್ಷವು ಚುನಾವಣೆಗಳಲ್ಲಿ ಗೆಲ್ಲಲು ವಿಫಲವಾದಾಗಲೆಲ್ಲಾ ಭಾರತ ವಿರೋಧಿ ಗುಂಪುಗಳೊಂದಿಗೆ ಕೆಲಸ ಮಾಡಿದೆ. ಭಾರತದ ವಿರುದ್ಧದ ಶಕ್ತಿಗಳು ಒಟ್ಟಾಗಿ ಸರ್ಕಾರ ಮತ್ತು ಸಂಸ್ಥೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ. ಸಾರ್ವಜನಿಕರು ಈ ದೇಶದ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ನ್ಯಾಯಾಂಗ ಮತ್ತು ಚುನಾವಣಾ ಆಯೋಗವನ್ನು ದುರ್ಬಲಗೊಳಿಸಲು ಮಾರಾಟ ಮಾಡಲಾಗಿದೆ ಎಂದು ಅವರು ಪದೇ ಪದೇ ಹೇಳುತ್ತಿದ್ದಾರೆ ಎಂದು ಹೇಳಿದ್ದರು.(ಏಜೆನ್ಸೀಸ್)