

ಮಣಿಪುರ: ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾನುವಾರ ಮಣಿಪುರದಿಂದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಪ್ರಾರಂಭಿಸಲು ಕಾಂಗ್ರೆಸ್ ಸಿದ್ಧವಾಗುತ್ತಿದ್ದಂತೆ, ಕೈ ನಾಯಕರು ಪ್ರಯಾಣಿಸಲಿರುವ ಬಸ್‌ನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇಂದು ಮಣಿಪುರದ ತೌಬಲ್‌ನಿಂದ ಯಾತ್ರೆ ಆರಂಭವಾಗಿದ್ದು, 110 ಜಿಲ್ಲೆಗಳ ಮೂಲಕ 67 ದಿನಗಳ ಕಾಲ 6,700 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು 15 ರಾಜ್ಯಗಳಲ್ಲಿ 100 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಸಂಸತ್ತಿನಲ್ಲಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸರ್ಕಾರ ಅವಕಾಶ ನೀಡದ ಕಾರಣ ಈ ಯಾತ್ರೆಯನ್ನು ಕೈಗೆತ್ತಿಕೊಳ್ಳುವುದಾಗಿ ಕಾಂಗ್ರೆಸ್ ತಿಳಿಸಿದೆ.
ಈ ಉಪಕ್ರಮವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಇದು ಚುನಾವಣಾ ಯಾತ್ರೆಯಲ್ಲ ಎಂದು ಕಾಂಗ್ರೆಸ್ ಒತ್ತಿ ಹೇಳಿದೆ. ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಕುರಿತು ಕಿಡಿಕಾರಿದ್ದ ಕೈ ನಾಯಕರು, ಬಿಜೆಪಿ ಧರ್ಮ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ,(ಏಜೆನ್ಸೀಸ್).