

Anurag Thakur: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಾಂಗ್ಲಾದೇಶ ಮತ್ತು ನೇಪಾಳದಂತಹ ಪರಿಸ್ಥಿತಿಯನ್ನು ಭಾರತದಲ್ಲಿ ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಸಂಸದ ಅನುರಾಗ್ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕೂರ್, ವೋಟ್ ಚೋರಿ ಹೈಡ್ರೋಜನ್ ಬಾಂಬ್ ಹಾಕುವುದಾಗಿ ಎಚ್ಚರಿಸಿದ್ದ ವಿಪಕ್ಷ ನಾಯಕರು, ಬಿಜೆಪಿ ಮತ್ತು ಚುನಾವಣಾ ಆಯೋಗದ ಬಗ್ಗೆ ಆಧಾರರಹಿತ ಆರೋಪ ಮಾಡಿದ್ದಾರೆ ಎಂದರು.
ರಾಹುಲ್ರ ನೇತೃತ್ವದಲ್ಲಿ ಕಾಂಗ್ರೆಸ್ ಸುಮಾರು 90 ಚುನಾವಣೆಗಳಲ್ಲಿ ಸೋತಿದ್ದು, ಈಗ ಈ ರೀತಿಯ ನಿರಾಧಾರ ಆರೋಪ ಮಾಡುವ ಮೂಲಕ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ, ಇಂದಿನ ಪತ್ರಿಕಾಗೋಷ್ಠಿಯಲ್ಲಿ 'ಹೈಡ್ರೋಜನ್ ಬಾಂಬ್' ಬೀಳುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅವರು ಪಟಾಕಿಗಳೊಂದಿಗೆ ಬಂದಿದ್ದರು ಅದು ಕೂಡ ಸದ್ದು ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ಆರೋಪಗಳ ರಾಜಕೀಯವನ್ನೇ ತಮ್ಮ ಆಭರಣವನ್ನಾಗಿ ಮಾಡಿಕೊಂಡಿದ್ದಾರೆ. ತಪ್ಪು ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಅವರ ಹವ್ಯಾಸ, ಕ್ಷಮೆಯಾಚಿಸುವುದು ಮತ್ತು ನ್ಯಾಯಾಲಯಗಳಿಂದ ವಾಗ್ದಂಡನೆಗೆ ಒಳಗಾಗುವುದು ದಿನಚರಿಯಾಗಿದೆ ಎಂದು ಠಾಕೂರ್ ಹೇಳಿದರು.
ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಮತ ದೋಚುವವರಿಗೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ರಾಹುಲ್, ಕರ್ನಾಟಕದ ಆಳಂದ ಮತ್ತು ಮಹಾರಾಷ್ಟ್ರದ ರಾಜೂರ ಕ್ಷೇತ್ರಗಳ ಉದಾಹರಣೆಗಳನ್ನು ಉಲ್ಲೇಖ ಮಾಡಿ, ಸಾಫ್ಟ್ವೇರ್ ಬಳಸಿ ದೇಶಾದ್ಯಂತ ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.(ಏಜೆನ್ಸೀಸ್)