ಬಿಜೆಪಿ ದಶಕಗಳ ಕಾಲ ಆಡಳಿತ ನಡೆಸುತ್ತದೆ ಎಂಬ ಅಮಿತ್​ ಷಾ ಹೇಳಿಕೆ; ಇದು ಮತಕಳ್ಳತನದ ಆತ್ಮವಿಶ್ವಾಸ ಎಂದ ವಿಪಕ್ಷ ನಾಯಕ ರಾಹುಲ್​ ಗಾಂಧಿ! | Rahul Gandhi

Rahul Gandhi
Published on

Rahul Gandhi: ಬಿಜೆಪಿ ದಶಕಗಳ ಕಾಲ ಅಧಿಕಾರದಲ್ಲಿ ಉಳಿಯುತ್ತದೆ ಎಂದಿರುವ ಗೃಹಸಚಿವ ಅಮಿತ್​ ಷಾ ಹೇಳಿಕೆಗೆ ತಿರುಗೇಟು ನೀಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಇದು ಮತ ಕಳ್ಳತನದ ಸತ್ಯವನ್ನು ಬಯಲು ಮಾಡಿದೆ ಎಂದಿದ್ದಾರೆ.

ಮತದಾರರ ಅಧಿಕಾರ ಯಾತ್ರೆಯ ಭಾಗವಾಗಿ ಬಿಹಾರದ ಮಧುಬನಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ ಸರ್ಕಾರ 40-50 ವರ್ಷಗಳ ಕಾಲ ಇರುತ್ತದೆ ಎಂದು ಅಮಿತ್ ಷಾ ಅನೇಕ ಬಾರಿ ಹೇಳಿದ್ದಾರೆ, ಹಾಗಾದರೆ, ಅವರು 40-50 ವರ್ಷಗಳ ಕಾಲ ಅಧಿಕಾರದಲ್ಲಿ ಇರುವುದು ಅವರಿಗೆ ಹೇಗೆ ಗೊತ್ತು ಎಂದು ಯೋಚಿಸುತ್ತಿದ್ದೇನೆ ಎಂದು ವ್ಯಂಗ್ಯವಾಡಿದರು.

2017 ರಲ್ಲಿ ಮಧ್ಯಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಅಮಿತ್ ಶಾ ಈ ಹೇಳಿಕೆ ನೀಡಿದ್ದರು, ಬಿಜೆಪಿ ಮತ ಕಳ್ಳತನ ಮಾಡುತ್ತದೆ ಎಂಬ ಸತ್ಯ ದೇಶದ ಮುಂದೆ ಬಯಲಾಗಿದೆ. ಇದು ಮೊದಲು ಗುಜರಾತ್‌ನಲ್ಲಿ ಪ್ರಾರಂಭವಾಗಿ ನಂತರ 2014 ರ ಲೋಕಸಭೆಯ ಚುನಾವಣೆ ಮೂಲಕ ರಾಷ್ಟ್ರಮಟ್ಟಕ್ಕೆ ವಿಸ್ತರಿಸಿಸಿತು ಬಳಿಕ ಇತರ ರಾಜ್ಯಗಳಿಗೆ ವರ್ಗಾವಣೆಯಾಯಿತು ಎಂದರು. ಸಾಕ್ಷ್ಯಾಧಾರಗಳನ್ನಿಟ್ಟುಕೊಂಡೆ ಆರೋಪ ಮಾಡುತ್ತೇನೆ ಎಂದ ರಾಹುಲ್​​, ನಾನು ಸುಳ್ಳು ಹೇಳುವುದಿಲ್ಲ, ನನ್ನ ಮುಂದೆ ಸತ್ಯಗಳು ಇದ್ದಾಗ ಮಾತ್ರ ನಾನು ವಿಷಯಗಳನ್ನು ಹೇಳುವುದಾಗಿ ತಿಳಿಸಿದರು. ಬಿಹಾರದ ಯುವಕರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು, ಈ ಪ್ರತಿಭಟನೆ ಬಿಜೆಪಿ ನಾಯಕತ್ವ ಮತ್ತು ಚುನಾವಣಾ ಆಯೋಗವನ್ನು ಮತಗಳನ್ನು ಕದಿಯುವ ಮುನ್ನ ಎರಡು ಬಾರಿ ಯೋಚಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ನಾಗರಿಕರ ಹಕ್ಕುಗಳಾದ ಮತ, ಪಡಿತರ ಚೀಟಿ, ಭೂಮಿಯನ್ನು ಹಂತ ಹಂತವಾಗಿ ಕಸಿದುಕೊಳ್ಳುತ್ತಿದ್ದು, ಇನ್ನು ಮುಂದೆ ಇದಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದರು.​(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net