

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಾಮೂಹಿಕ ಅತ್ಯಾಚಾರಿ ಎಂದು ಕರೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ಕೋರಿ ಸಲ್ಲಿಸಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅ. 21 ಕ್ಕೆ ಮುಂದೂಡಿದೆ.
ಈ ವಿಚಾರವಾಗಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷ ಚಿ.ನಾ.ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಅವರನ್ನು ಸಾಮೂಹಿಕ ಅತ್ಯಾಚಾರಿ ಎಂದು ವ್ಯಾಖ್ಯಾನಿಸಿದ್ದರು. ಅವರ ಈ ಹೇಳಿಕೆಯಿಂದ ಸ್ಥಳೀಯ ಮಹಿಳೆಯರು ಅವಮಾನಿಸಿದಂತಾಗಿದ್ದು, ಹಾಸನದ ಭಾಗದ ಪ್ರತಿ ಮನೆಗಳಲ್ಲಿಯೂ ಮಹಿಳೆಯರನ್ನು ಸಂಶಯದಿಂದ ಕಾಣುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಪ್ರಕರಣವನ್ನು ತುರ್ತು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು.
ವಾದ ಆಲಿಸಿದ ನ್ಯಾಯಪೀಠ ಅರ್ಜಿಯನ್ನು ತರ್ತು ವಿಚಾರಣೆಗೊಳಪಡಿಸಲು ನಿರಾಕರಿಸಿದೆ. ಹಾಗೂ ವಿಚಾರಣೆಯನ್ನು ಅ. 21ಕ್ಕೆ ನಿಗದಿಮಾಡಿದೆ.