ದೇಶ ತಿರಸ್ಕರಿಸಿದ ನಾಯಕ ರಾಹುಲ್ ಗಾಂಧಿ; ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಅಣಕ

IMG_20240404_114609
Published on

ಬೆಂಗಳೂರು: ಕಾಂಗ್ರೆಸ್ ಗೆ ಸದಾ ಪರಿವಾರದ್ದೇ ಚಿಂತೆ. ಹೊಸ ನಾಯಕತ್ವ, ದೇಶದ ಅಭಿವೃದ್ಧಿ ಬಗ್ಗೆ ಕಿಂಚಿತ್ ಕಾಳಜಿ, ಯೋಚನೆಯಿಲ್ಲ. ದೇಶವೇ ತಿರಸ್ಕರಿಸಿದ ನಾಯಕ ರಾಹುಲ್ ಗಾಂಧಿಯನ್ನು ಹೊರಳಿ ಮರಳಿ ನಾಯಕನನ್ನಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಅಣಕವಾಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಮರು ಆಯ್ಕೆ ಬಯಸಿ ಗುರುವಾರ ನಾಮಪತ್ರ ಸಲ್ಲಿಸುವ ಮುನ್ನ, ಜಯನಗರ ನಾಲ್ಕನೇ ಹಂತದ ಬಡಾವಣೆಯ ಗಣಪತಿ ದೇವಸ್ಥಾನದ ಮುಂಬದಿ ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು‌.

ರಾಜಕೀಯ ಅಧಿಕಾರ ದಾಹಕ್ಕೆ ದೇಶದ ಆಂತರಿಕ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ. ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ನಿಷೇಧಿತ ಪಿಎಫ್ ಐ ಜತೆಗೆ ಎಸ್ ಡಿಪಿಐ ಒತ್ತಾಸೆ ನೀಡಿದೆ. ಇಂತಹ ಪಕ್ಷದ ಬೆಂಬಲವನ್ನು ಕಾಂಗ್ರೆಸ್ ಪಡೆದಿದೆ ಎಂದು ಆರೋಪಿಸಿದರು.

ತಪ್ಪು ಮಾಹಿತಿ

ಕಳೆದ ಒಂದು ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಏನೂ ಮಾಡಿಲ್ಲ, ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ಬಿಜೆಪಿ ಗೆಲ್ಲಲು ಬಯಸುತ್ತದೆ ಎಂಬ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ ಸಾಧನೆ ಗಮನಾರ್ಹವಾದುದು ಎಂದರು.

80 ಕೋಟಿ ಜನರಿಗೆ ಉಚಿತ ಅಕ್ಕಿ ಪೂರೈಸುತ್ತಿದೆ. ಶೌಚಗೃಹ ನಿರ್ಮಾಣ, ಉಚಿತ ಅಡುಗೆ ಅನಿಲ ಸಂಪರ್ಕ, ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ, ಕಿಸಾನ್ ಸಮ್ಮಾನ್, ಮೂಲ ಸವಲತ್ತುಗಳ ಅಭಿವೃದ್ಧಿ, ಪ್ರಗತಿಗೆ ಹೊಸ ಆಯಾಮ ನೀಡಿದೆ. ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು ಭಾರತ ಶಕ್ತವಾಗಿದೆ ಎಂದು ಅನುರಾಗ ಸಿಂಗ್ ಠಾಕೂರ್ ವಿವರಿಸಿದರು.

ಲೂಟಿಗೆ ಇಳಿದ ಕಾಂಗ್ರೆಸ್

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಗ್ಯಾರಂಟಿ ಹೆಸರಿನಲ್ಲಿ ಜನರ ಮೇಲೆ ತೆರಿಗೆ, ಸಾಲದ ಭಾರ ಹೊರಿಸಿ, ಕುಡಿಯುವ ನೀರಿಗೆ ಹಾಹಾಕಾರ ಕಾಂಗ್ರೆಸ್ ಸರ್ಕಾರ ಲೂಟಿಗೆ ಇಳಿದಿದೆ ಎಂದು ಆರೋಪಿಸಿದರು.

ಮೋದಿಯವರು ದೇಶದ ಕಾವಲುಗಾರ, ಆಭಿವೃದ್ಧಿಯ ಹರಿಕಾರನೆಂದು ಜನರು ಅರಿತಿದ್ದಾರೆ. ಇದಕ್ಕಾಗಿಯೇ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಬಯಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರನ್ನು ಈ ಬಾರಿ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಆರ್.ಅಶೋಕ್ ಮನವಿ ಮಾಡಿದರು.

ತೇಜಸ್ವಿ ಸೂರ್ಯ ಸಚಿವ

ಸಂಸದ ಪ್ರತಾಪಸಿಂಹ ಮಾತನಾಡಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದು, ಅವರ ಸಚಿವ ಸಂಪುಟದಲ್ಲಿ ತೇಜಸ್ವಿ ಸೂರ್ಯ ಒಬ್ಬರಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕ ಎಂ.ಸತೀಶ್ ರೆಡ್ಡಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿದರು‌.

ಸಮಾವೇಶದ ಮೊದಲು ಗಿರಿನಗರ ವಿನಾಯಕ ದೇವಸ್ಥಾನದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪೂಜೆ ಸಲ್ಲಿಸಿ, ತೇಜಸ್ವಿಸೂರ್ಯ ಅವರ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕರು, ಬಿಜೆಪಿ, ಜೆಡಿಎಸ್ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.

ಬಹಿರಂಗ ಸಮಾವೇಶದ ಬಳಿಕ ಒಂದು ಕಿ.ಮೀ. ಉದ್ದದ ಬೃಹತ್ ಪಾದಯಾತ್ರೆ ನಡೆಯಿತು. ಜಯನಗರ ಎರಡನೇ ಹಂತದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದರು. ಸಮಾವೇಶ ಹಾಗೂ ಪಾದಯಾತ್ರೆಯಲ್ಲಿ ಭಾರತ ಮಾತಾ ಕೀ ಜಯಘೋಷ, ಜೈಶ್ರೀರಾಮ ಹಾಗೂ ಮೋದಿ ಪರ ಘೋಷಣೆಗಳು, ವಾದ್ಯ ವೃಂದದ ಸದ್ದು ಚುನಾವಣಾ ಕಣಕ್ಕೆ ರಂಗೇರಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net