Satyam Shivam Sundaram: 'ಸತ್ಯಂ ಶಿವಂ ಸುಂದರಂ' ಎಂದ ರಾಹುಲ್ ಗಾಂಧಿ: ನವೆಂಬರ್ 1ರ ರಾಮಲೀಲಾ ಮೈದಾನದ ಬೃಹತ್ ರ್‍ಯಾಲಿಗೆ ‘ಕೈ’ ಸಜ್ಜು!

Rahul Gandhi, Satyam Shivam Sundaram
ರಾಹುಲ್ ಗಾಂಧಿಯ 'ಸತ್ಯಂ ಶಿವಂ ಸುಂದರಂ' ಎಕ್ಸ್ ಪೋಸ್ಟ್ ವೈರಲ್​
Published on: 

Save the Vote Rally: ದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆಯಲಿರುವ ಬೃಹತ್ 'ಸೇವ್ ದಿ ವೋಟ್' ರ್‍ಯಾಲಿಗೂ ಮುನ್ನ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ‘ಸತ್ಯಂ ಶಿವಂ ಸುಂದರಂ’ ಎಂದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್‌ನಲ್ಲಿ ಕಪ್ಪು ಹಿನ್ನೆಲೆಯ ಮೇಲೆ ಮೂರು ಬಿಳಿ ಗೆರೆಗಳು ಹಾಗೂ ಮಧ್ಯದಲ್ಲಿ ಕೆಂಪು ತಿಲಕವಿರುವ ಗ್ರಾಫಿಕ್ಸ್‌ ಇದ್ದು, ಇದು ಲಾರ್ಡ್ ಶಿವನ 'ತ್ರಿಪುಂಡ್ರ ತಿಲಕ್'ನಂತೆ ಕಾಣುತ್ತದೆ.

ಪ್ರತಿಭಟನೆಯನ್ನು ಶಿವನ ತಾಂಡವಕ್ಕೆ ಹೋಲಿಕೆ

ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯನ್ನು ರಾಹುಲ್ ಗಾಂಧಿ ಅವರು 'ಶಿವನ ತಾಂಡವ'ಕ್ಕೆ ಹೋಲಿಸಿದ್ದರು. ಈ ಹೋರಾಟಕ್ಕೆ ಯಾವುದೇ ಪೂರ್ವಯೋಜಿತ ಪ್ಲಾನ್ ಬೇಕಿಲ್ಲ. ಇದು ನಿರಂತರವಾಗಿ ಸಾಗುವ ಶಿವನ ಮೆರವಣಿಗೆಯಂತೆ, ಯಾರು ಬೇಕಾದರೂ ಇದರಲ್ಲಿ ಭಾಗಿಯಾಗಬಹುದು ಎಂದಿದ್ದರು. ಇದಕ್ಕೂ ಮುನ್ನ ಸಂಸತ್ತಿನಲ್ಲಿ ಶಿವನ ಚಿತ್ರ ಪ್ರದರ್ಶಿಸಿ ಅಭಯಮುದ್ರೆ ಹಾಗೂ ನಿರ್ಭಯತೆಯ ಮಹತ್ವವನ್ನೂ ಅವರು ವಿವರಿಸಿದ್ದರು.

ನವೆಂಬರ್ 1ರಂದು ದೆಹಲಿ ಚಲೋ ಕರೆ

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗುತ್ತಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನಮ್ಮ ಮತಗಳನ್ನು ಕದಿಯಲಾಗುತ್ತಿದ್ದು, ಇದನ್ನು ನಾವು ಸುಮ್ಮನೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಮಲೀಲಾ ಮೈದಾನದಲ್ಲಿ 'ಮೆಗಾ ರ್‍ಯಾಲಿ'

ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ವ್ಯಾಪಾರಿಗಳು ಸೇರಿದಂತೆ ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರತಿಯೊಬ್ಬರೂ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ 'ಮೆಗಾ ರ್‍ಯಾಲಿ'ಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚಿನ... ಸ್ಫೋಟಕ ಹೇಳಿಕೆ ನೀಡಿದ ಬಾಲಿವುಡ್​ ಬ್ಯೂಟಿ ರಾಧಿಕಾ ಆಪ್ಟೆ! Radhika Apte

ಪ್ರತಿಭಟನೆಯಿಂದಾಗಿ ದೆಹಲಿಯಲ್ಲಿ ಮೆಟ್ರೋ ಬಂದ್ ಮತ್ತು ರಸ್ತೆಗಳನ್ನು ಸೀಲ್ ಮಾಡಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ರಾಹುಲ್, ‘ಆರೋಪಿ ನಂ. 4 ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಮೋದಿ ಅವರಿಗೆ ಹೇಳಿ, ಆಗ 30 ಸೆಕೆಂಡುಗಳಲ್ಲಿ ಪ್ರತಿಭಟನೆ ನಿಲ್ಲುತ್ತದೆ’ ಎಂದು ದೆಹಲಿಯ ವ್ಯಾಪಾರಿಗಳಿಗೆ ಎಕ್ಸ್ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net