

ನವದೆಹಲಿ: ಸತ್ಯ ಹಾಗೂ ಅಹಿಂಸೆಯೇ ನನ್ನ ದೇವರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತಮಗೆ ಸೂರತ್ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ರಾಹುಲ್, ನನ್ನ ಧರ್ಮವು ಸತ್ಯ ಹಾಗೂ ಅಹಿಂಸೆಯಾಗಿದೆ. ಸತ್ಯವೇ ನನ್ನ ದೇವರು, ಅದನ್ನ ಪಡೆಯಲು ಅಹಿಂಸೆಯೇ ಮಾರ್ಗ ಎಂದು ಹೇಳುತ್ತಾ, ಮಹಾತ್ಮ ಗಾಂಧೀಜಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಎಲ್ಲಾ ಕಳ್ಳರ ಉಪನಾಮಗಳು ಮೋದಿ ಎಂದು ಇರುತ್ತವೆ. ಉದಾಹರಣೆಗೆ ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಹೆಸರನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದರು.
ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪೂರ್ಣೇಶ್ ಮೋದಿ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಸುಮಾರು ನಾಲ್ಕು ವರ್ಷ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ರಾಹುಲ್ ಗಾಂಧಿಯನ್ನು ದೋಷಿ ಎಂದು ಪರಿಗಣಿಸಿ ಎರಡು ವರ್ಷ ಜೈಲು ಶಿಕ್ಷೆಯ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆ(IPC Section) 499 ಮತ್ತು 500 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ರಾಹುಲ್ 2021ರಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.