ಪ್ರಧಾನಿ ಮೋದಿ ತಾಯಿಯ ಕುರಿತು ಅವಹೇಳನಕಾರಿ ಮಾತು; ರಾಹುಲ್​ ವಿರುದ್ಧ ಗೃಹ ಸಚಿವ ಅಮಿತ್​ ಷಾ ಕಿಡಿ! | Amit Shah

Amit Shah Rahul Gandhi,
Published on

Amit Shah: ಬಿಹಾರದಲ್ಲಿ ಇತ್ತೀಚೆಗೆ ನಡೆದ ಇಂಡಿಯಾ ಬ್ಲಾಕ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಹೇಳನಕಾರಿ ಪದ ಬಳಸಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ(ಆಗಸ್ಟ್​ 29) ಖಂಡಿಸಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಷಾ, ಎರಡು ದಿನಗಳ ಹಿಂದೆ ನಡೆದಿರುವ ಘಟನೆ ಎಲ್ಲರಿಗೂ ನೋವುಂಟು ಮಾಡಿದೆ. ಮೋದಿ ಅವರ ತಾಯಿ ಬಡ ಕುಟುಂಬದಲ್ಲಿ ಜೀವನ ನಡೆಸಿದ್ದರು, ತಮ್ಮ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಕಲಿಸುತ್ತಾ ಬೆಳೆಸಿದ್ದಾರೆ. ಅಂತಹ ಮಾದರಿಯ ಜೀವನ ನಡೆಸಿದವರಿಗೆ ನಿಂದನಾತ್ಮಕ ಪದಗಳನ್ನು ಬಳಸಿರುವುದು ಭಾರತದ ಜನರು ಎಂದಿಗೂ ಸಹಿಸುವುದಿಲ್ಲ ಎಂದರು.

ಈ ವಿಷಯವಾಗಿ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯವರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತಾ, ದೇವರು ಓಳ್ಳೆ ಬುದ್ಧಿ ನೀಡಲಿ ಎಂದರು. ಘುಸ್ಪೈಥಿಯಾ ಬಚಾವೋ ಯಾತ್ರೆ ಮೂಲಕ ಬಿಹಾರದ ಜನರನ್ನು ದಾರಿ ತಪ್ಪಿಸುತ್ತಿದ್ದು, ಕಾಂಗ್ರೆಸ್​​​ನಿಂದ ದ್ವೇಷದ ಸಂಸ್ಕೃತಿ ಹರಡುತ್ತಿದೆ, ಅವರ ಇಂತಹ ನಡೆಗಳಿಂದಲೇ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದರು.

ಘಟನೆ ಏನು.?

ಬಿಹಾರದ ದರ್ಭಾಂಗದಲ್ಲಿ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಪೋಸ್ಟರ್‌ಗಳನ್ನು ಇರುವ ವೇದಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿರುವುದು ವಿಡಿಯೋದಲ್ಲಿದೆ. ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಇದೇ ಸ್ಥಳದಿಂದ ಮುಜಫರ್‌ಪುರಕ್ಕೆ ಬೈಕ್​ ರ‍್ಯಾಲಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ನಿಂದನಾತ್ಮಕ ಹೇಳಿಕೆಗಳನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವಾರು ನಾಯಕರು ಖಂಡಿಸಿದ್ದಾರೆ.  ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ದರ್ಭಂಗಾ ಪೊಲೀಸರು ಆರೋಪಿ ಮೊಹಮ್ಮದ್ ರಿಜ್ವಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net