ಫಾಕ್ಸ್​ಕಾನ್ ಮುಖ್ಯಸ್ಥ ಯಂಗ್ ಲಿಯು ಭೇಟಿಯಾದ ರಾಹುಲ್ ಗಾಂಧಿ: ಭವಿಷ್ಯದ ತಂತ್ರಜ್ಞಾನ ಬೆಳವಣಿಗೆ ಕುರಿತು ಚರ್ಚೆ

tg
Published on

ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಶುಕ್ರವಾರ ಫಾಕ್ಸ್​ಕಾನ್ ಛೇರ್ಮನ್ ಯಂಗ್ ಲಿಯು ಅವರನ್ನು ಭೇಟಿ ಮಾಡಿದರು.

‘ಹೋನ್ ಹಾಯ್ ಟೆಕ್ನಾಲಜಿ ಗ್ರೂಪ್​ನ (ಫಾಕ್ಸ್​ಕಾನ್) ಛೇರ್ಮನ್ ಯಂಗ್ ಲಿಯು ಅವರನ್ನು ಭೇಟಿ ಮಾಡಿದ್ದು ಖುಷಿಯಾಯಿತು. ಭಾರತ ಮತ್ತು ಜಗತ್ತಿನ ಭವಿಷ್ಯದ ತಂತ್ರಜ್ಞಾನ ಬೆಳವಣಿಗೆ ಕುರಿತು ಚರ್ಚಿಸಿದೆವು ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿ ವಿವರಿಸಿದ್ದಾರೆ.

ಸರಿಯಾದ ಪ್ರೋತ್ಸಾಹದಿಂದ ಭಾರತ ತಂತ್ರಜ್ಞಾನ ಮಾರುಕಟ್ಟೆ ಮುಂದಿನ ದಿನಗಳಲ್ಲಿ ಪ್ರಮುಖ ಸ್ಥಾವರದಲ್ಲಿರಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಫಾಕ್ಸ್​ಕಾನ್ ಚೆನ್ನೈನ ಪೆರಂಬುದೂರಿನಲ್ಲಿ ಐಫೋನ್ ಅಸೆಂಬ್ಲಿಂಗ್ ಘಟಕ ಹೊಂದಿದೆ. ಕರ್ನಾಟಕ, ಆಂಧ್ರಪ್ರದೇಶದಲ್ಲೂ ತನ್ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದೆ. ಚೆನ್ನೈನಲ್ಲಿ ಅದು ಐಫೋನ್​ಗಳ ಅಸೆಂಬ್ಲಿಂಗ್ ಮಾಡುತ್ತದೆ. ಗೂಗಲ್​ನ ಪಿಕ್ಸೆಲ್ ಫೋನ್​ಗಳನ್ನು ತಯಾರಿಸಲೂ ಫಾಕ್ಸ್​ಕಾನ್ ಗುತ್ತಿಗೆ ಪಡೆಯುವ ಸಾಧ್ಯತೆ ಇದೆ.

ತೈವಾನ್ ಮೂಲದ ಫಾಕ್ಸ್​ಕಾನ್ ಸಂಸ್ಥೆ ತನ್ನದೇ ಬ್ರ್ಯಾಂಡ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಹೊಂದಿಲ್ಲ. ಆ್ಯಪಲ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ಕಂಪನಿಗಳ ಉತ್ಪನ್ನಗಳನ್ನು ಗುತ್ತಿಗೆ ಆಧಾರದಲ್ಲಿ ತಯಾರಿಸಿಕೊಡುತ್ತದೆ. ಈ ರೀತಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ವಿಶ್ವದ ಅತಿದೊಡ್ಡ ಕಂಪನಿ ಎನಿಸಿದೆ ಫಾಕ್ಸ್​ಕಾನ್. ಆಪಲ್​ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಫಾಕ್ಸ್ ಕಾನ್ ಭಾರತದಲ್ಲಿ 40 ಸಾವಿರ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net