ರಾಹುಲ್​ ಗಾಂಧಿ ಈಗ ಸದ್ದಾಮ್​ ಹುಸೇನ್​ ಥರ ಕಾಣ್ತಾ ಇದ್ದಾರೆ: ಅಸ್ಸಾಂ ಸಿಎಂ

raga biswa
Published on

ಅಹಮದಾಬಾದ್​: ಇಂದು ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಸಾರ್ವಜನಿಕ ಸಭೆ ಒಂದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ 'ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಸದ್ದಾಂ ಹುಸೇನ್‌ ಥರ ಕಾಣುತ್ತಿದ್ದಾರೆ' ಎಂದಿದ್ದಾರೆ. ಸದ್ಯ ಗುಜರಾತ್​ನಲ್ಲಿ ಚುನಾವಣಾ ತಯಾರಿ ನಡೆಯುತ್ತಿದ್ದು ಅಹಮದಾಬಾದ್​ನಲ್ಲಿ ಬಿಜೆಪಿಯ ಅಭ್ಯರ್ಥಿ ಪರವಾಗಿ ಹಿಮಂತ್​ ಬಿಸ್ವಾ ಪ್ರಚಾರಕ್ಕೆಂದು ತೆರಳಿದ್ದರು.

ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿರುವುದನ್ನು ಪ್ರಶ್ನಿಸಿದ ಹಿಮಂತ್​ ಬಿಸ್ವಾ 'ಗುಜರಾತ್‌ನಲ್ಲಿ ಅವರು ಕಾಣಿಸುವುದೇ ಇಲ್ಲ. ಅವರು ಅತಿಥಿ ಉಪಸನ್ಯಾಸಕರಂತೆ ರಾಜ್ಯಕ್ಕೆ ಬರುತ್ತಾರೆ. ಅವರು ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಮಾಡಿಲ್ಲ. ಅವರು ಎಲ್ಲಿ ಚುನಾವಣೆಗಳೇ ಇಲ್ಲವೋ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅವರು ಸೋಲಿನ ಭಯದಿಂದ ಈ ರೀತಿ ಮಾಡುತ್ತಿದ್ದಾರೆ' ಎಂದು ಅಸ್ಸಾಂ ಸಿಎಂ ರಾಹುಲ್​ ಗಾಂಧಿಯ ಕಾಲೆಳೆದಿದ್ದಾರೆ.

ಈ ಹಿಂದೆ ಭಾರತ್ ಜೋಡೋ ಯಾತ್ರೆಗೆ ಸೇರಲು ಕಾಂಗ್ರೆಸ್ ಬಾಲಿವುಡ್ ನಟ-ನಟಿಯರಿಗೆ ಹಣ ನೀಡಿರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಆರೋಪಿಸಿದ್ದರು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪೂಜಾ ಭಟ್ ಮತ್ತು ಅಮೋಲ್ ಪಾಲೇಕರ್​ರನ್ನು ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದರು.

ಅಫ್ತಾಬ್​ ಶ್ರದ್ಧಾ ವಾಕರ್​ ಎನ್ನುವ ಯುವತಿಯನ್ನು ಕೊಲೆ ಮಾಡಿದ ಸುದ್ದಿಗೆ ಸಂಬಂಧಿಸಿದಂತೆ ನಿನ್ನೆ ಧನ್ಸುರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಹಿಮಂತ್​ ಬಿಸ್ವಾ 'ಲವ್ ಜಿಹಾದ್' ಅನ್ನು ನಿಗ್ರಹಿಸಲು ಕಠಿಣ ಕಾನೂನು ಬೇಕು ಎಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net