

ನವದೆಹಲಿ: ದೇಶ ಇಂದು ಪುಲ್ವಾಮಾ ದಾಳಿಯ ಕಹಿನೆನಪಿನಲ್ಲಿದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯ ಲಾಭ ಗಳಿಕೆ ಉದ್ದೇಶದಿಂದ ಮಾಡಿದ ಮೂರು ಪ್ರಶ್ನೆಗಳ ಟ್ವೀಟ್ಗೆ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ನಲ್ಲಿ ಏನಿತ್ತು?: ಪುಲ್ವಾಮ ದಾಳಿಗೆ ಒಂದು ವರ್ಷ: ಹುತಾತ್ಮರನ್ನು ಸ್ಮರಿಸುತ್ತಾ ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆ ಕೇಳಿದ ರಾಹುಲ್ ಗಾಂಧಿ
ಪುಲ್ವಾಮಾ ದಾಳಿಯಲ್ಲಿ 40 ಜನ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದು ಇದರ ಲಾಭ ಯಾರಿಗಾಯಿತು ಎಂಬಿತ್ಯಾದಿ ಮೂರು ಪ್ರಶ್ನೆಗಳು ದೇಶದ ಜನರ ಮುಂದಿಟ್ಟ ರಾಹುಲ್ ಗಾಂಧಿ ಅವರ ಟ್ವೀಟ್ಗೆ ಹಲವರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ರಾಹುಲ್ ಗಾಂಧಿ ಅವರ ಟ್ವೀಟ್ನ ರಾಜಕೀಯ ಉದ್ದೇಶ ಬೇರೆಯೇ ಇದ್ದುದರಿಂದ ಬಿಜೆಪಿಯಿಂದ ಅಧಿಕೃತವಾದ ಪ್ರತಿಕ್ರಿಯೆಯನ್ನು ಎಲ್ಲರೂ ನಿರೀಕ್ಷಿಸುತ್ತಿದ್ದರು. ಇದಕ್ಕೆ ಪೂರಕವಾಗಿ,ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಅತ್ಯಂತ ಅಮಾನವೀಯ ಉಗ್ರ ದಾಳಿಯ ಕಾರಣಕ್ಕೆ ಪುಲ್ವಾಮಾದಲ್ಲಿ ಹುತಾತ್ಮರಾದವರಿಗೆ ದೇಶ ಗೌರವ ಸಲ್ಲಿಸುತ್ತಿದ್ದರೆ, ಎಲ್ಇಟಿ, ಜೈಷ್ ಏ ಮೊಹಮ್ಮದ್ಗಳ ಹಿತೈಷಿ ಎಂದೇ ಗುರುತಿಸಲ್ಪಟ್ಟ ರಾಹುಲ್ ಗಾಂಧಿ ಸರ್ಕಾರವನ್ನು ಟಾರ್ಗೆಟ್ ಮಾಡಿರುವುದಷ್ಟೇ ಅಲ್ಲ, ಭದ್ರತಾ ಪಡೆಗಳನ್ನೂ ಟಾರ್ಗೆಟ್ ಮಾಡಿದ್ದಾರೆ. ನಿಜವಾದ ಅಪರಾಧಿ ಪಾಕಿಸ್ತಾನವನ್ನು ರಾಹುಲ್ ಗಾಂಧಿ ಎಂದಿಗೂ ಪ್ರಶ್ನಿಸರು. ರಾಹುಲ್ ನಿಮಗೆ ಶೇಮ್ ಆಗಬೇಕು! ಎಂದು ಟ್ವೀಟ್ ಮಾಡಿದ್ದಾರೆ.
ಶಾನ್ವಾಜ್ ಹುಸೇನ್ ಕೂಡ ರಾಹುಲ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದು,ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನ ಇದು. ಕಾಂಗ್ರೆಸ್ ಈ ರೀತಿ ಇದಕ್ಕೆ ಮೊದಲೂ ಮಾಡಿತ್ತು. ಈ ಬ್ಲಂಡರ್ಗಾಗಿ ಜನ ಅವರಿಗೆ ಒಂದು ಪಾಠ ಕಲಿಸಿದ್ದಾರೆ.ರಾಹುಲ್ ಗಾಂಧಿಯವರ ಪ್ರತಿಕ್ರಿಯೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಎದುರಿಸುವುದಕ್ಕೆ ಪಾಕಿಸ್ತಾನಕ್ಕೆ ನೆರವಾದೀತು ಎಂದು ಖಂಡಿಸಿದ್ದಾರೆ.
(ಏಜೆನ್ಸೀಸ್)