

ಬೆಂಗಳೂರು: ಬಿಜೆಪಿಗೆ ರಾಹುಲ್ ಗಾಂಧಿ ಭಯ ಶುರುವಾಗಿದೆ. ಭಾರತ್ ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ ನಾಯಕತ್ವ, ಪಕ್ಷ ಬಲಿಷ್ಠವಾಗುತ್ತಿರುವುದು ಗಮನಿಸಿದ್ದಾರೆ. ಈ ಭಯದಿಂದಲೇ ರಾಹುಲ್ ಗಾಂಧಿಯನ್ನು ರಾವಣನಂತೆ ಬಿಂಬಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಚಾಟಿ ಬೀಸಿದರು.
ವಿಧಾನಸೌಧದಲ್ಲಿ ಸಾರಿಗೆ ಇಲಾಖೆ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಉತ್ತರಭಾರತದಲ್ಲಿ ರಾವಣನನ್ನು ಪೂಜಿಸುವ ಸಂಸ್ಕೃತಿಯಿದೆ. ಯುದ್ಧಾರಂಭದಲ್ಲಿ ರಾಮನ ಹೆಸರಿಗೆ ರಾವಣ ಸಂಕಲ್ಪ ಮಾಡಿಸಿದ್ದನೆಂದು ಕೇಳಿ ತಿಳಿದುಕೊಂಡಿರುವೆ ಎಂದು ಹೇಳಿದರು.
ಬಿಜೆಪಿಯವರು ತಮ್ಮ ದಿಗಿಲು ಮುಚ್ಚಿಕೊಳ್ಳಲು ರಾಹುಲ್ ಗಾಂಧಿಯವರನ್ನು ಕೆಟ್ಟದಾಗಿ ಚಿತ್ರಿಸಿರುವುದು ಖಂಡಿಸಿ, ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಚಿವ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ನಾನೂ ತಡವಾಗಿ ಭಾಗಿಯಾಗುವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಹೊಸದಾಗಿ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಗಮನಿಸಿರುವೆ. ಪ್ರತಿ ಹಳ್ಳಿಯಲ್ಲಿ ಮದ್ಯದ ಅಂಗಡಿ ತೆರೆಯಬೇಕು ಎಂದು ಬಯಸುತ್ತಿಲ್ಲ. ಹೊಸದಾಗಿ ಲೈಸನ್ಸ್ ನೀಡುವುದಕ್ಕೆ ಅದರದ್ದೇ ಆದ ಕಾನೂನು, ಕಟ್ಟಳೆಗಳಿವೆ. ಎಂಎಸ್ ಐ ಎಲ್ ಯಿದೆ. ಎಲ್ಲವನ್ನೂ ಸ್ಟ್ರೀಮ್ ಲೈನ್ ಮಾಡಬೇಕೆಂಬ ಚಿಂತನೆಯಿದೆ ಎಂದು ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ಗೆ ಶೇಕಡ 20ರಷ್ಟು ಲಿಂಗಾಯತ ಸಮುದಾಯದವರು ಮತ ಚಲಾಯಿಸಿದ್ದು, ಏಳು ಮಂತ್ರಿ ಸ್ಥಾನ ನೀಡಲಾಗಿದೆ ಎಂಬ ಪಕ್ಷದ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಬರೆದ ಪತ್ರವನ್ನು ಒಪ್ಪಲಾಗದು. ಗೌಪ್ಯ ಮತದಾನವಾಗುತ್ತದೆ. ಸಮುದಾಯವಾರು ನಿರ್ದಿಷ್ಟವಾಗಿ ಮತ ಚಲಾವಣೆಯಾಗಿದೆ ಎಂದು ಹೇಳಲಾಗದು. ಎಲ್ಲ ಜಾತಿ-ಜನಗದವರು ಬೆಂಬಲಿಸಿದ್ದರಿಂದ ಕಾಂಗ್ರೆಸ್ ಗೆ 136 ಶಾಸಕರ ಬಲ ದೊರೆತು ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದು ಸಮಜಾಯಿಷಿ ನೀಡಿದರು.
ಬೆಂಗಳೂರಿನಲ್ಲಿ ಯಾವುದೇ ಹೊಸ ತೆರಿಗೆ ವಿಧಿಸುವ ಪ್ರಸ್ತಾವನೆಯಿಲ್ಲ. ಜನರು ಪ್ರಾಮಾಣಿಕವಾಗಿ ಸ್ವಯಂ ಆಸ್ತಿ ತೆರಿಗೆ ಘೋಷಣೆ, ಪಾವತಿಸಿದರಷ್ಟೇ ಸಾಕು. ಬಿಬಿಎಂಪಿ ಆದಾಯ ತನ್ನಿಂದತಾನೇ ವೃದ್ಧಿಯಾಗಿ ಹೊಸ ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.