

ಪಟ್ನಾ: ಎಐಸಿಸಿ ಮಾಜಿ ಅಧ್ಯಕ್ಷ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ದೇಶಾದ್ಯಂತ ಜಾತಿ ಗಣತಿ ನಡೆಸುತ್ತೇವೆ. ರಾಜಕೀಯ ನಷ್ಟವನ್ನು ಅನುಭವಿಸಿದರೂ ಚಿಂತೆಯಿಲ್ಲ ಎಂದು ಹೇಳಿದ್ದಾರೆ.
ಬಿಹಾರದ ಪಟ್ನಾದಲ್ಲಿ ನಡೆದ ಸಂವಿಧಾನ ಸುರಕ್ಷಾ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ (Rahul Gandhi), ಇತರೆ ಹಿಂದುಳಿದ ವರ್ಗ, ಎಸ್ಸಿ-ಎಸ್ಟಿ, ಮುಸ್ಲಿಮರ ಜನಸಂಖ್ಯೆ ಶೇ. 80ರಷ್ಟಿದ್ದು, ಕಾಂಗ್ರೆಸ್ ಯಾವುದೇ ಬೆಲೆ ತೆತ್ತಾದರೂ ರಾಷ್ಟ್ರವ್ಯಾಪಿ ಜಾತಿ ಜನಗಣತಿಯನ್ನು ನಡೆಸುತ್ತದೆ ಎಂದು ಹೇಳಿದ್ದಾರೆ.
ಜಾತಿಗಣತಿ ಪ್ರತಿಯೊಂದು ಜಾತಿಯಲ್ಲೂ ಎಷ್ಟು ಜನಸಂಖ್ಯೆ ಇದೆ ಮತ್ತು ಅಧಿಕಾರಶಾಹಿ, ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಆ ಜಾತಿಯವರು ಎಷ್ಟು ಭಾಗವಹಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ನೀವು ಯಾವುದಾದರು ಸರ್ಕಾರಿ ಕಚೇರಿ ಅಥವಾ ಬೇರೆ ಕಡೆ ನೋಡಿದರೆ ಶೇ. 10ರಷ್ಟು ಜನರು ಒಬಿಸಿ, ಎಸ್-ಎಸ್ಟಿ, ಮುಸ್ಲಿಮರಿರುತ್ತಾರೆ. ಈ ಕಾರಣಕ್ಕಾಗಿ ಜಾತಿಗಣತಿ ಅವಶ್ಯವಾಗಿದೆ. ನಾವು ರಾಜಕೀಯ ನಷ್ಟವನ್ನು ಅನುಭವಿಸಿದರೂ ಚಿಂತೆಯಿಲ್ಲ ಎಂದು ಹೇಳಿದ್ದಾರೆ.
ನಾವು ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡ ಬಳಿಕ ಔಷಧಿಯನ್ನು ಶಿಫಾರಸು ಮಾಡುವಂತೆ, ನಾವು ಸಹ ಸಂಖ್ಯಾತ್ಮಕವಾಗಿ ಪ್ರಬಲವಾಗಿರುವ ಆದರೆ ಸರ್ಕಾರಿ ವಲಯದಲ್ಲಿ ದುರ್ಬಲ ಪ್ರಾತಿನಿಧ್ಯವನ್ನು ಹೊಂದಿರುವ ವಂಚಿತ ವರ್ಗಗಳಿಗೆ ನೀತಿಗಳನ್ನು ರೂಪಿಸುತ್ತೇವೆ. ಬಿಹಾರದಲ್ಲಿ ಈ ಹಿಂದೆ ನಡೆಸಿದ್ದ ಜಾತಿ ಸಮೀಕ್ಷೆ ನಕಲಿಯಾಗಿದ್ದು, ನಾವು ಆ ರೀತಿ ಮಾಡುವುದಿಲ್ಲ.
ಕೇಂದ್ರ ಸರ್ಕಾರದ 90 ಹಿರಿಯ ಅಧಿಕಾರಿಗಳು ದೇಶದ ಬಜೆಟ್‌ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರಲ್ಲಿ ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಭಾಗವಹಿಸುವಿಕೆ ಶೇ.10ರಷ್ಟು ಕೂಡ ಇಲ್ಲ. ಆದರೆ, ಭಾರತದ ಜನಸಂಖ್ಯೆಯಲ್ಲಿ ಈ ವರ್ಗಗಳ ಪಾಲು ಶೇ.90ರಷ್ಟಿದೆ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾಗವತ್ ಹೇಳಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ಇದು ಬಿಆರ್ ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.