

ಮೈಸೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರು ಹಾಗೂ ಸ್ಥಳೀಯ ನಾಯಕರು ಅದ್ಧೂರಿಯಾಗಿ ಬರಮಾಡಿಕೊಂಡರು.
ಇಂದು ಬೆಳಗ್ಗೆ 11 ಗಂಟೆಗೆ ಯೋಜನೆಗೆ ಚಾಲನೆ ದೊರೆಯಬೇಕಿತ್ತು. ಆದರೆ, ರಾಹುಲ್ ಗಾಂಧಿ ಅವರಿಗೆ ವಿಮಾನ ವಿಳಂಬವಾದ್ದರಿಂದ ಕಾರ್ಯಕ್ರಮ ಆರಂಭವಾಗುವುದು ತಡವಾಗುತ್ತಿದೆ. ವಿಶೇಷ ವಿಮಾನ ಬೆಳಗ್ಗೆ 11.05 ಕ್ಕೆ ಬರಬೇಕಿತ್ತು. ಆದರೆ, ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ವಿಮಾನಕ್ಕೆ ಕಾದು ಕುಳಿತು ತಡವಾಗಿ ವಿಮಾನವೇರಿ ಮೈಸೂರಿನ ಕಡೆಗೆ ಪ್ರಯಾಣಿಸಿದರು.
ಸುಮಾರು 12.20ಕ್ಕೆ ರಾಹುಲ್ ಗಾಂಧಿ ಅವರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ರಾಹುಲ್ ಗಾಂಧಿ ಜತೆ ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಆಗಮಿಸಿದರು. ರಾಹುಲ್ ಗಾಂಧಿ ಅವರಿಗೆ ಹೂ ಗುಚ್ಚ ನೀಡಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಚಿವರುಗಳಾದ ಎಚ್. ಸಿ. ಮಹದೇವಪ್ಪ, ಭೈರತಿ ಸುರೇಶ್, ವೆಂಕಟೇಶ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಅವರು ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆ ನೀಡಿದರು. ಇಂದು ರಕ್ಷಾ ಬಂಧನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ರಾಕಿ ಕಟ್ಟಿ, ಚಾಮುಂಡೇಶ್ವರಿ ವಿಗ್ರಹ ನೀಡಿ ಸ್ವಾಗತಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಬೇದಿಕೆ ನಿರ್ಮಾಣವಾಗಿದೆ. ಇನ್ನೂ ಕೆಲವೇ ಕ್ಷಣಗಳಲ್ಲಿ ಯೋಜನೆಗೆ ಅದ್ಧೂರಿ ಚಾಲನೆ ದೊರೆಯಲಿದ್ದು, ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಮಹಿಳೆಯರು ಆಗಮಿಸಿದ್ದಾರೆ. ಇದರಿಂದ ಮಹಾರಾಜ ಕಾಲೇಜು ಮೈದಾನ ತುಂಬಿ ತುಳುಕುತ್ತಿದೆ. ಇಡೀ ಸಭಾಂಗಣ ಭರ್ತಿಯಾಗಿದೆ. ಇದರಿಂದಾಗಿ ಕೆಲ ಮಹಿಳೆಯರು ಮೈದಾನದಿಂದ ವಾಪಸ್ಸಾಗಿದ್ದಾರೆ. ಮಹಿಳೆಯರು ಹೆಚ್ಚಾಗಿರುವುದರಿಂದ ಮೈದಾನದ ಗೇಟ್ ಕ್ಲೋಸ್ ಮಾಡಲಾಗಿದೆ.
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಮನೆ ಯಜಮಾನಿಗೆ ಉಚಿತ ಹಣ ನೀಡುವ ಯೋಜನೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋ ಮುನ್ನ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಈ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ 2000 ರೂ. ನೀಡಲಾಗುತ್ತದೆ. ಒಂದೇ ಮನೆಯಲ್ಲಿ ಅತ್ತೆ-ಸೊಸೆ ಇದ್ದಲ್ಲೆ, ಮನೆಯ ಯಜಮಾನಿ ಯಾರು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಬೇಕು. ಈಗಾಗಲೇ 1.28 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಇಂದು ಎಲ್ಲರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ.
ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಯುವಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳಿಗೆ ಅದ್ಧೂರಿ ಚಾಲನೆ ದೊರೆತಿದೆ. ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆಯಲಿದೆ. ಉಳಿದ ಯುವನಿಧಿ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ. (ದಿಗ್ವಿಜಯ ನ್ಯೂಸ್)