

ಬೆಂಗಳೂರು: ರಾಹುಲ್ ಗಾಂಧಿಯವರಿಗೆ ಹಣ ಕಳುಹಿಸಿದ ವಿಚಾರ ಹೊರಕ್ಕೆ ಬರಬಹುದೆಂಬ ಕಾರಣಕ್ಕೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹು ಕೋಟಿ ರೂ ಅಕ್ರಮ ವರ್ಗಾವಣೆ ಪ್ರಕರಣದ ಸಿಬಿಐ ತನಿಖೆಗೆ ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆರೋಪಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾಎ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಐಟಿಗಳು ರಾಜ್ಯ ಸರಕಾರ ನೀಡುವ ಆದೇಶ ಪಾಲಿಸುವ ಏಜೆನ್ಸಿಗಳು ಎಂದರು. ಸತ್ಯಾಂಶ ಹೊರಕ್ಕೆ ಬರಲು ಸಿಬಿಐ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.
ದೀರ್ಘ ಕಾಲ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರಿಗೆ ನಾಗೇಂದ್ರರನ್ನು ವಜಾ ಮಾಡುವ ಧೈರ್ಯ ಇಲ್ಲ ಮತ್ತು ಭ್ರಷ್ಟಾಚಾರಕ್ಕೆ ಪುಷ್ಟಿ ಕೊಡುವ ದಾರಿಯಲ್ಲಿ ಮುಂದೆ ಮುಂದೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು. ನಾನು ಮುಖ್ಯಮಂತ್ರಿ ಆಗಿದ್ದರೆ ಇಂಥ ಸಚಿವನನ್ನು ಮರುದಿನವೇ ವಜಾ ಮಾಡುತ್ತಿದ್ದೆ ಎಂದರಲ್ಲದೆ, ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿರುವುದು ಈ ಭ್ರಷ್ಟಾಚಾರಕ್ಕೆ ಒಂದು ಜ್ವಲಂತ ಸಾಕ್ಷಿ ಎಂದು ಡಿ.ವಿ.ಸದಾನಂದಗೌಡ ಟೀಕಿಸಿದರು.
ಹಲವು ಖಾಸಗಿ ವ್ಯಕ್ತಿಗಳಿಗೆ ಹಣ ವರ್ಗಾವಣೆ ಆಗಿದ್ದು, ಸರಕಾರ ಮಾಹಿತಿ ಕೊಡುತ್ತಿಲ್ಲ. ನಿಗಮದ ಅಧ್ಯಕ್ಷರು ಸತ್ಯ ಸಂಗತಿ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಕೇಳಿದ ಅವರು, ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಹಾಗೂ ಸಿಬಿಐ ತನಿಖೆ ಮಾಡಿಸಲು ಒತ್ತಾಯಿಸಿದರು. ನಾಗೇಂದ್ರರು 2 ದಿನಗಳಿಂದ ಕಾಣೆಯಾಗಿದ್ದಾರೆ. ಈ ಕುರಿತು ಸಿಎಂ ಮಾಹಿತಿ ಕೊಡಲಿ ಎಂದು ಒತ್ತಾಯಿಸಿದರು.
ಪೂರ್ಣ ಪ್ರಮಾಣದ ಸಾಕ್ಷ್ಯಗಳಿದ್ದರೂ ಸಿದ್ದರಾಮಯ್ಯನವರು ಮೌನಿ ಆಗಿರುವುದೇಕೆ ಎಂದು ಪ್ರಶ್ನಿಸಿದರು. ಮಾತೆತ್ತಿದರೆ ನಾವು ಭ್ರಷ್ಟಾಚಾರ ವಿರೋಧಿಗಳು, 40 ಶೇ. ಕಮಿಷನ್ ಹೊಡೆದವರನ್ನು ಇಳಿಸಿದ್ದೀವಿ, ಭ್ರಷ್ಟಾಚಾರದ ತನಿಖೆ ಮಾಡಲು ಆಯೋಗ ರಚಿಸಿದ್ದಾಗಿ ಹೇಳುವ ಸಿದ್ದರಾಮಯ್ಯನವರು ಭ್ರಷ್ಟಾಚಾರ ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಸಂಘದವರು ಇವತ್ತು ಬಿಲ್ ಸಿಗದೆ ಒದ್ದಾಡುವಂತಾಗಿದೆ. ಕಮಿಷನ್‍ಗಾಗಿ ಬೇಡಿಕೆ ಕುರಿತು ದೊಡ್ಡದಾಗಿ ಹೇಳುವಂತಾಗಿದೆ. ರಟ್ಟಿನ ಪೆಟ್ಟಿಗೆಗಳಲ್ಲಿ ಹಣವೂ ಸಿಕ್ಕಿದೆ ಎಂದರು. ಇದೇ 6ರ ಬಳಿಕ ದೊಡ್ಡ ಪ್ರಮಾಣದ ಹೋರಾಟವನ್ನು ಬಿಜೆಪಿ ನಡೆಸಲಿದೆ ಎಂದು ತಿಳಿಸಿದರು.
15 ಖಾಸಗಿ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದೆ. ಇದು ನೇರವಾಗಿ ಕಾಂಗ್ರೆಸ್ಸಿನ ಎಟಿಎಂಗೆ ಹೋಗುವ ಹಣವೆಂದು ಸಾಬೀತು ಪಡಿಸಿದೆ. ಸಚಿವರ ಸೂಚನೆ ಅಡಿಯಲ್ಲೇ ಇದು ನಡೆದಿದೆ ಎಂದು ಹೇಳಿದ್ದರೂ ಸಿದ್ದರಾಮಯ್ಯನವರು ಜಾಣಕುರುಡರಾಗಿ ನಾಗೇಂದ್ರರ ರಾಜೀನಾಮೆ ಪಡೆದಿಲ್ಲ. ಮೂರು ಖಾತೆಗಳು ಹೈದರಾಬಾದ್ ಮೂಲದವು. ಇದರ ಮೂಲಕ ತೆಲಂಗಾಣಕ್ಕೆ ಹಣದ ವ್ಯವಸ್ಥೆ ಮಾಡಿದ್ದಾರೆ ಎಂದು ಡಿ.ವಿ.ಸದಾನಂದಗೌಡ ಆರೋಪಿಸಿದರು.
ಮಾಜಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮುಖಂಡ ಜಗದೀಶ ಹಿರೇಮನಿ ಇದ್ದರು.