

Rahul Gandhi: ಆಪರೇಷನ್ ಸಿಂಧೂರ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ 22 ಮಕ್ಕಳನ್ನು ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ದತ್ತು ಪಡೆಯಲಿದ್ದಾರೆ.
ಮೇ 24ರಂದು ಪೂಂಚ್ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಈ ವೇಳೆ ಅನಾಥ ಮಕ್ಕಳನ್ನು ಗುರುತಿಸಲು ಮತ್ತು ಅವರ ಶಿಕ್ಷಣದ ವೆಚ್ಚವನ್ನು ಭರಿಸುವಂತೆ ಪಕ್ಷದ ನಾಯಕರಿಗೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ವಕ್ತಾರ ರವೀಂದ್ರ ಶರ್ಮಾ, "ಆಪರೇಷನ್ ಸಿಂದೂರ್ ಸಮಯದಲ್ಲಿ ಪೂಂಚ್ನಲ್ಲಿ ಪಾಕಿಸ್ತಾನ್ ಶೆಲ್ ದಾಳಿಯಲ್ಲಿ ಪೋಷಕರನ್ನು ಕಳೆದುಕೊಂಡ 22 ಮಕ್ಕಳನ್ನು ರಾಹುಲ್ ಗಾಂಧಿಯವರು ದತ್ತು ಪಡೆಯಲಿದ್ದಾರೆ. ಅವರ ಒಟ್ಟು ಶಿಕ್ಷಣದ ವೆಚ್ಚವನ್ನು ಭರಿಸಲಿದ್ದಾರೆ" ಎಂದು ಹೇಳಿದ್ದಾರೆ.
"ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಪೂಂಚ್ಗೆ ಹೋಗಿ 22 ಮಕ್ಕಳನ್ನು ಗುರುತಿಸಿದ್ದಾರೆ. ಪಾಕ್ ಶೆಲ್ ದಾಳಿಯಲ್ಲಿ ತಮ್ಮ ಪೋಷಕರಲ್ಲಿ ಒಬ್ಬರನ್ನು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡವರನ್ನು ಪಟ್ಟಿ ಮಾಡಲಾಗಿದೆ. ಮಕ್ಕಳಿಗೆ ಮತ್ತು ಮನೆಗೆ ಆಧಾರವಾಗಿದ್ದವರನ್ನೇ ಕಳೆದುಕೊಂಡಿದ್ದಾರೆ. ಅಂಥವರನ್ನು ಗುರುತಿಸಿದ್ದೇವೆ" ಎಂದು ತಿಳಿಸಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಮುಖ್ಯಸ್ತ, ಯೂತ್ ಕಾಂಗ್ರೆಸ್ ಅಧ್ಯಕ್ಷರು ನಾಳೆ(ಬುಧವಾರ) ಪೂಂಚ್ಗೆ ಭೇಟಿ ನೀಡಲಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಮೊದಲ ಕಂತಿನ ಸಹಾಯವನ್ನು ನೀಡಲಿದ್ದಾರೆ" ಎಂದು ಶರ್ಮಾ ಹೇಳಿದ್ದಾರೆ.
ಏಪ್ರಿಲ್ 22ರಂದು ಪಾಕ್ ಮೂಲದ ಉಗ್ರರು ಪಹಲ್ಗಾಮ್ನಲ್ಲಿ ದಾಳಿ ಮಾಡಿ 26 ಪ್ರವಾಸಿಗರನ್ನು ಕೊಂದಿದ್ದರು. ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕ್ ಉಗ್ರರ ಕ್ಯಾಂಪ್ ಗುರಿಯಾಗಿಸಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಮೇ 7ರಂದು ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತ ಮತ್ತು ಪಾಕ್ ನಡುವೆ 4 ದಿನಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಗಡಿ ಜಿಲ್ಲೆ ಪೂಂಚ್ ಪಾಕ್ನ ಶೆಲ್ ದಾಳಿಗೆ ಹೆಚ್ಚು ಹಾನಿಗೊಳಗಾಯಿತು. ಕನಿಷ್ಠ 13 ಜನ ಮೃತಪಟ್ಟು, 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ನೂರಾರು ಮನೆಗಳು ಹಾನಿಗೊಳಗಾಗಿದ್ದವು. (ಏಜೆನ್ಸೀಸ್)