

ಬೆಂಗಳೂರು:
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ದೂರು ದಾಖಲಿಸಿದೆ.
ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಬಾಸ್ಕರರಾವ್ ನೇತೃತ್ವದಲ್ಲಿ ಠಾಣೆಗೆ ತೆರಳಿದ್ದ ಬಿಜೆಪಿ ನಿಯೋಗ ದೂರು ನೀಡಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ದೂರು ನೀಡಿದ್ದಾರೆ. ತಕ್ಷಣ ಎ್ಐಆರ್ ದಾಖಲಿಸಲು ಪೊಲೀಸರನ್ನು ಕೋರಿದ್ದೇವೆ ಎಂದರು.
ದೇಶದ ಬಗ್ಗೆ ಹೊರದೇಶದಲ್ಲಿ ಕುಳಿತು ಅಪಮಾನಕರ ಹೇಳಿಕೆ ನೀಡಿದ್ದಾರೆ. ಸಮುದಾಯಗಳನ್ನು ನಿಂದಿಸಿದ್ದಾರೆ. ರಾಹುಲ್ ಅವರು ಪ್ರಬುದ್ಧರಾಗಿದ್ದಾರೆಂದು ಭಾವಿಸಿದ್ದೆವು. ಅವರು ಪ್ರಬುದ್ಧತೆ ಪಡೆದಿಲ್ಲ ಎಂದು ಈಗ ಗೊತ್ತಾಗುತ್ತಿದೆ ಎಂದರು.
1977-78ರಲ್ಲಿ ಮೊರಾರ್ಜಿ ದೇಸಾಯಿಯವರ ಸರಕಾರ ಇದ್ದಾಗ ರಾಹುಲ್ ಅವರ ಅಜ್ಜಿ ಇಂದಿರಾ ಗಾಂಧಿ ಅವರನ್ನು ಬಂಧಿಸಿದ್ದರು. ಮತ್ತೆ ಚುನಾವಣೆ ನಡೆದಾಗ ಇಂದಿರಾ ಅವರು ಮತ್ತೆ ಪ್ರಧಾನಿಯಾದರು. ಅಮೆರಿಕಕ್ಕೆ ಹೋದಾಗ ಅಲ್ಲಿನ ಪತ್ರಕರ್ತರು ಇಂದಿರಾ ಅವರನ್ನು ನೀವು ಎಲ್ಲರನ್ನು ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಕಳಿಸಿದ್ದೀರಿ. ಈಗ ನಿಮ್ಮ ಜೈಲಿನ ಅನುಭವ ಹೇಳಿ ಎಂದು ಪ್ರಶ್ನಿಸಿದ್ದರು. ಆಗ ಅವರ ಅಜ್ಜಿ, ಅದು ನನ್ನ ದೇಶದ ವಿಚಾರ. ಹೊರಗಡೆ ಅದನ್ನು ನಾನು ಪ್ರಸ್ತಾಪ ಮಾಡುವುದಿಲ್ಲ ಎಂದಿದ್ದರು ಎಂದು ಗಮನ ಸೆಳೆದರು.
ರಾಹುಲ್ ಅವರೇ, ನಿಮ್ಮ ಅಜ್ಜಿಯನ್ನು ನೋಡಿ ನೀವು ಕಲಿತಿಲ್ಲ. ಇನ್ನೇನು ಕಲೀತೀರಿ ನೀವು? ಎಂದು ಪ್ರಶ್ನಿಸಿದರು.
ಮೋದಿಯವರ ಕುರಿತು ಹಗುರವಾಗಿ ಹೊರದೇಶದಲ್ಲಿ ಮಾತನಾಡುತ್ತೀರಿ. ನೀವೇನೇ ಮಾತನಾಡಬೇಕಿದ್ದರೂ ನಮ್ಮ ದೇಶದಲ್ಲಿ ಮಾತನಾಡಿ. ಇಂಥ ಕೆಟ್ಟ ಪರಿಸ್ಥಿತಿಯನ್ನು ಕಾಂಗ್ರೆಸ್ಸಿನಿಂದ ಮತ್ತು ರಾಹುಲ್ ಗಾಂಧಿಯಿಂದ ಈ ದೇಶವಾಸಿಗಳು ಅನುಭವಿಸಬೇಕಾಗಿದೆ ಎಂದರು.
ಬಿಜಾಪುರ (ವಿಜಯಪುರ), ಬೆಳಗಾವಿ, ಬಾಗಲಕೋಟೆಯಲ್ಲೂ ಇವತ್ತು ದೂರುಗಳನ್ನು ಕೊಡಲಾಗಿದೆ. ಬೇರೆ ರಾಜ್ಯಗಳಲ್ಲೂ ಕೂಡ ದೂರುಗಳು ದಾಖಲಾಗಿವೆ. ಯಾವುದೇ ಸಬೂಬು ನೀಡದೆ ಎ್ಐಆರ್ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಸಂವಿಧಾನ ರಕ್ಷಕರು ತಾವೇ ಎನ್ನುತ್ತಾರೆ. ಸಂವಿಧಾನಕ್ಕೆ ಅಪಮಾನ ಮಾಡುತ್ತಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಕುಮಾರ್ ತೆಲ್ಕೂರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮೊದಲಾದ ಪ್ರಮುಖರು ಇದ್ದರು ಎಂದರು.