

ರಾಯ್ಪುರ: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್ಗಢದಲ್ಲಿ ತಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜನತೆಗೆ 10 ಲಕ್ಷ ರೂಪಾಯಿ ವರೆಗಿನ ಉಚಿತ ಚಿಕಿತ್ಸಾ ಸೌಲಭ್ಯವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಛತ್ತೀಸ್ಗಢದ ರಾಜನಂದಗಾಂವ್ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೃಷಿ ಭೂಮಿ ರಹಿತ ಕಾರ್ಮಿಕರಿಗೆ ವರ್ಷಕ್ಕೆ 10 ಸಾವಿರ ರೂಪಾಯಿ ಹಣವನ್ನು ಸರ್ಕಾರದಿಂದ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಜಅತಿ ಗಣತಿ ನಡೆಸಲಾಗುವುದು. ರಾಜ್ಯದ ಜನತೆಗೆ 10 ಲಕ್ಷ ರೂಪಾಯಿ ವರೆಗಿನ ಉಚಿತ ಚಿಕಿತ್ಸಾ ಸೌಲಭ್ಯವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು. ಕಾಂಗ್ರೆಸ್ ಸರ್ಕಾರ ಬಡವರು, ದಲಿತರು, ರೈತರು, ಕಾರ್ಮಿಕರು, ಹಿಂದುಳಿದ ವರ್ಗಗಳು ಹಾಗೂ ಆದಿವಾಸಿ ಜನತೆಯೆ ಧ್ವನಿಯನ್ನು ಕೇಳುತ್ತದೆ.
ನೀವು ಕಾಂಗ್ರೆಸ್ ಬಗ್ಗೆ ಮಾತನಾಡಬೇಕಿಲ್ಲ. ನಿಮ್ಮ ಹೃದಯದ ಮಾತು ನಮಗೆ ಕೇಳಿಸುತ್ತದೆ. ನಾವು ಭೇಟಿ ನೀಡಿದ ಪ್ರತಿಯೊಂದು ಸ್ಥಳದಲ್ಲೂ ಜನ ಕಾಂಗ್ರೆಸ್ ರೈತರು ಹಾಗೂ ಬಡವರಿಗಾಗಿ ಜಾರಿ ಮಾಡಿದ ಯೋಜನೆಗಳನ್ನು ಈಗಲೂ ಸ್ಮರಿಸುತ್ತಾರೆ. ಅದೇ ರೀತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಜಾತಿ ಗಣತಿಗೆ ಆದೇಶಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಛತ್ತೀಸ್ಗಢದಲ್ಲಿ ಭರವಸೆ ನೀಡಿದ್ದಾರೆ.
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 90 ಸದಸ್ಯಬಲದ ಛತ್ತೀಸ್ಗಢ ವಿಧಾನಸಭೆಗೆ ನವೆಂಬರ್ 07 ಹಾಗೂ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.