

ಮಜುಲಿ(ಅಸ್ಸಾಂ): ಬುಡಕಟ್ಟು ಜನರನ್ನು ಕಾಡಿಗಷ್ಟೇ ಸೀಮಿತಗೊಳಿಸಿ ಅವರನ್ನು ಶಿಕ್ಷಣ ಮತ್ತಿತರ ಅವಕಾಶಗಳಿಂದ ವಂಚಿಸುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯ ಅಂಗವಾಗಿ ಅಸ್ಸಾಂನ ಮಜುಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನೈಸರ್ಗಿಕ ಸಂಪನ್ಮೂಲಗಳ ಮೇಲೆ ‘ಆದಿವಾಸಿಗಳ’ ಹಕ್ಕನ್ನು ಕಾಂಗ್ರೆಸ್ ಪಕ್ಷ ಮಾನ್ಯ ಮಾಡುತ್ತದೆ. ನಾವು ನಿಮ್ಮನ್ನು ಆದಿವಾಸಿಗಳೆಂದು ಕರೆಯುತ್ತೇವೆ. ಮೂಲ ನಿವಾಸಿಗಳು ಎನ್ನುವುದು ಅದರ ಅರ್ಥ. ಆದರೆ ಬಿಜೆಪಿ ನಿಮ್ಮನ್ನು ವನವಾಸಿಗಳು ಎಂದು ಕರೆಯುತ್ತದೆ. ಅರಣ್ಯಗಳಲ್ಲಿ ವಾಸಿಸುವವರು ಎಂದು ಅದರ ಅರ್ಥವಾಗಿದೆ ಎಂದು ಗಾಂಧಿ ವ್ಯಾಖ್ಯಾನಿಸಿದರು.
ನಿಮಗೇ ವಾಪಸ್: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿ, ಬುಡಕಟ್ಟು ಜನರನ್ನು ಕಾಡಿಗೆ ಸೀಮಿತ ಗೊಳಿಸಲು ಬಯಸುತ್ತದೆ. ಅವರ ಮಕ್ಕಳು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಹೋಗುವುದು, ಇಂಗ್ಲಿಷ್ ಕಲಿಯುವುದು ಮತ್ತು ವ್ಯಾಪಾರ ವಹಿವಾಟು ಮಾಡುವುದರಿಂದ ಅದು ವಂಚಿಸುತ್ತಿದೆ ಎಂದು ಟೀಕಿಸಿದರು. ‘ನಿಮಗೆ ಸೇರಿದ್ದನ್ನು ನಿಮಗೇ ಮರಳಿಸುವುದು ನಮ್ಮ ಉದ್ದೇಶವಾಗಿದೆ. ನಿಮ್ಮ ನೀರು, ಭೂಮಿ ಮತ್ತು ಕಾಡು ನಿಮ್ಮದಾಗಬೇಕು’ ಎಂದು ಬುಡಕಟ್ಟು ಜನರೇ ಅಧಿಕವಾಗಿರುವ ದ್ವೀಪ ಜಿಲ್ಲೆ ಮಜುಲಿಯಲ್ಲಿ ಗಾಂಧಿ ಹೇಳಿದರು.
ಲೋಕಸಭೆ ಸದಸ್ಯತ್ವ ಕುರಿತ ಅರ್ಜಿ ವಜಾ: ರಾಹುಲ್ ಗಾಂಧಿಯವರ ಲೋಕಸಭೆ ಸದಸ್ಯತ್ವವನ್ನು ಮರಳಿಸಿ 2023 ಆಗಸ್ಟ್ 7ರಂದು ಹೊರಡಿಸಲಾದ ಅಧಿಸೂಚನೆಯನ್ನು ರದ್ದುಗೊಳಿಸಬೇಕೆಂದು ಕೋರಿದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ಕೋರ್ಟ್ಗಳಿಗೆ ‘ಕ್ಷುಲ್ಲಕ’ ಅರ್ಜಿಗಳನ್ನು ಸಲ್ಲಿಸುವ ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಅದನ್ನು ನಿರುತ್ತೇಜನಗೊಳಿಸುವ ಉದ್ದೇಶದಿಂದ ಹಾಲಿ ಪ್ರಕರಣದ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು. ಲಖನೌನ ಅಶೋಕ್ ಪಾಂಡೆ ಎಂಬಾತ ಸಲ್ಲಿಸಿದ್ದ ಅರ್ಜಿ, ನ್ಯಾ. ಬಿ.ಆರ್. ಗವಾಯ್ ಮತ್ತು ನ್ಯಾ. ಸಂದೀಪ್ ಮೆಹ್ತಾ ಇದ್ದ ನ್ಯಾಯ ಪೀಠದ ಮುಂದೆ ವಿಚಾರಣೆಗೆ ಬಂದಾಗ ಕೋರ್ಟ್ ‘ಕ್ಷುಲ್ಲಕ’ ಅರ್ಜಿಗಳ ವಿಚಾರದಲ್ಲಿ ಕಠಿಣ ನಿಲುವನ್ನು ತಳೆಯಿತು.
ಏಕ ಚುನಾವಣೆಗೆ ಕಾಂಗ್ರೆಸ್ ವಿರೋಧ: ‘ಒಂದು ದೇಶ, ಒಂದು ಚುನಾವಣೆ’ಯು ಒಕ್ಕೂಟದ ಖಾತ್ರಿ ಹಾಗೂ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದ್ದು, ಆ ಸಂಬಂಧ ರಚನೆ ಆಗಿರುವ ಉನ್ನತಮಟ್ಟದ ಸಮಿತಿಯನ್ನು ವಿಸರ್ಜನೆಗೊಳಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ‘ಒಂದು ದೇಶ, ಒಂದು ಚುನಾವಣೆ’ ಕುರಿತ ಉನ್ನತ ಮಟ್ಟದ ಸಮಿತಿಯ ಕಾರ್ಯದರ್ಶಿ ನಿತೇನ್ ಚಂದ್ರಗೆ ಪತ್ರ ಬರೆದಿರುವ ಖರ್ಗೆ, ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಉಲ್ಲಂಘಿಸುವಲ್ಲಿ ಸಮಿತಿ ಮುಖ್ಯಸ್ಥರಾದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ವ್ಯಕ್ತಿತ್ವ ಮತ್ತು ಮಾಜಿ ರಾಷ್ಟ್ರಪತಿಯ ಕಚೇರಿಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳಲು ಬಿಡಬಾರದು ಎಂದು ಒತ್ತಾಯಿಸಿದ್ದಾರೆ. ‘ಒಂದು ದೇಶ, ಒಂದು ಚುನಾವಣೆ’ ಆಲೋಚನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಆಲೋಚನೆ ಕೈಬಿಡಬೇಕು. ಉನ್ನತಮಟ್ಟದ ಸಮಿತಿಯನ್ನು ವಿಸರ್ಜಿಸಬೇಕು ಎಂದು ಖರ್ಗೆ ಹೇಳಿದ್ದಾರೆ.
ಕೋಟಿ ರೂ. ಠೇವಣಿ ಇಡಿ!: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಯುಪಿಎಸ್ಆರ್ಟಿಸಿ) 1981ರಿಂದ 1989ರ ನಡುವೆ ನೀಡಲು ಬಾಕಿಯಿರುವ ವಾಹನಗಳ ಬಾಡಿಗೆ ಪ್ರಯುಕ್ತ ಒಂದು ಕೋಟಿ ರೂಪಾಯಿಯನ್ನು ಠೇವಣಿ ಇರಿಸುವಂತೆ ಉತ್ತರ ಪ್ರದೇಶ ಕಾಂಗ್ರೆಸ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. ರಾಜಕೀಯ ರ್ಯಾಲಿಗಳಿಗೆ ಜನರನ್ನು ಕರೆ ತರಲು ಹಾಗೂ ಅಂದಿನ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಭೇಟಿಗಳಿಗೆ ಬಳಸಿದ ಕಾರುಗಳು ಮತ್ತು ಟ್ಯಾಕ್ಸಿಗಳ ಬಾಡಿಗೆಯನ್ನು ಕಾಂಗ್ರೆಸ್ ಬಾಕಿಯಿರಿಸಿಕೊಂಡಿತ್ತು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಇದ್ದ ನ್ಯಾಯಪೀಠ, ಉತ್ತರ ಪ್ರದೇಶ ಸರ್ಕಾರ ಹಾಗೂ ಯುಪಿಎಸ್ಆರ್ಟಿಸಿಗೆ ನೋಟಿಸ್ ಜಾರಿ ಮಾಡಿ, ನಾಲ್ಕು ವಾರದೊಳಗೆ ಒಂದು ಕೋಟಿ ರೂಪಾಯಿ ಠೇವಣಿ ಇಡುವಂತೆ ರಾಜ್ಯ ಕಾಂಗ್ರೆಸ್ಗೆ ಸೂಚಿಸಿತು.