

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತನಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಆಪ್ತ ರವಿಶಂಕರ್ನ ಐಷಾರಾಮಿ ಜೀವನ ಕಂಡು ಸಿಸಿಬಿ ಪೊಲೀಸರೇ ದಂಗಾಗಿದ್ದಾರೆ.
ಆರ್ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿದ್ದ ರವಿಶಂಕರ್, ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ. ಫ್ಯಾನ್ಸಿ ನಂಬರ್ ಕೊಡುವ ವೇಳೆ ಹಲವು ಪ್ರಭಾವಿ ಉದ್ಯಮಿಗಳ ಪರಿಚಯವಾಗಿದ್ದು, ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ. ಕಳೆದ ನಾಲ್ಕು ವರ್ಷಗಳ ಹಿಂದೆ ಉದ್ಯಮಿಯೊಬ್ಬರು ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ರವಿಶಂಕರ್ಗೆ ನಟಿ ರಾಗಿಣಿ ದ್ವಿವೇದಿ ಪರಿಚಯವಾಗಿದ್ದರು. ಕ್ರಮೇಣ ಇಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆದಿತ್ತು.
ರಾಗಿಣಿ ಅಭಿನಯಿಸಿದ್ದ ಸಿನಿಮಾಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ರಮ ಹಾಗೂ ಪಾರ್ಟಿಯಲ್ಲಿ ರವಿಶಂಕರ್ ಪಾಲ್ಗೊಳ್ಳುತ್ತಿದ್ದ. ಹೋಟೆಲ್, ಪಬ್, ಪಾರ್ಟಿಗೆ ಸುತ್ತಾಡುವ ಮಟ್ಟಕ್ಕೆ ಇಬ್ಬರ ನಡುವೆ ಆತ್ಮೀಯತೆ ಇತ್ತು. ಅಲ್ಲದೆ, ಬೆಂಗಳೂರು ಮಾತ್ರವಲ್ಲದೆ ಗೋವಾ ಸೇರಿದಂತೆ ಹೊರ ರಾಜ್ಯಗಳಿಗೂ ತೆರಳಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ.
ಡ್ರಗ್ಸ್ ಪೂರೈಕೆ ಪ್ರಕರಣದ ಕಿಂಗ್ಪಿನ್ ಎನ್ನಲಾದ ಬಂಧಿತ ವೀರೇನ್ ಖನ್ನಾ ಆಯೋಜಿಸುತ್ತಿದ್ದ "ಡ್ರೈವ್ ಇನ್ ಥಿಯೇಟರ್' ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದಕ್ಕೆ ತಗುಲುವ ವೆಚ್ಚವನ್ನು ಆರೋಪಿಯೇ ಭರಿಸುತ್ತಿದ್ದ. ರವಿಶಂಕರ್ನ ಐಷಾರಾಮಿ ಜೀವನದ ಬೆನ್ನು ಬಿದ್ದಿರುವ ಸಿಸಿಬಿ ಪೊಲೀಸರು, ಆಸ್ತಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬ್ಯಾಂಕ್ ವಿವರವನ್ನು ಪರಿಶೀಲಿಸುತ್ತಿದ್ದಾರೆ.