

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ ‘ರಾಗಿ ಹೆಲ್ತ್ ಮಿಕ್ಸ್’ ಪುಡಿ ಮಿಶ್ರಿತ ಬಿಸಿ ಹಾಲು ನೀಡುವ ಕಾರ್ಯಕ್ರಮವನ್ನು ವಾರದಲ್ಲಿ ಮೂರರಿಂದ ಐದು ದಿನಗಳಿಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಕ್ಷೀರಭಾಗ್ಯ ಹಾಲಿನ ಜತೆ ಐದು ದಿನ ರಾಗಿ ಹೆಲ್ತ್ ಮಿಕ್ಸ್ ಪುಡಿ ನೀಡಲು ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಈಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಾಲಾ ಶಿಕ್ಷಣ ಆಯುಕ್ತರಿಗೆ ಅನುಮತಿ ನೀಡಿ ಆದೇಶಿಸಿದೆ.
ಚಿಕ್ಕಬಳ್ಳಾಫುರ ಜಿಲ್ಲೆ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ವಾರದಲ್ಲಿ ಮೂರು ದಿನ ಕ್ಷೀರ ಭಾಗ್ಯ ಯೋಜನೆಯ ಬಿಸಿ ಹಾಲಿನ ಜತೆಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿ ವಿತರಿಸಲಾಗುತ್ತಿದೆ. ಇದನ್ನು ಇನ್ನು ಮುಂದೆ ವಾರದಲ್ಲಿ ಐದು ದಿನಕ್ಕೆ ವಿಸ್ತರಿಸಲು ಆ ಸಂಸ್ಥೆಯೊಂದಿಗೆ ಸೂಕ್ತ ಒಪ್ಪಂದ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಅಲ್ಲದೆ, ಯೋಜನೆಗೆ ತಗಲುವ 100 ಕೋಟಿ ರೂ.ಗಳಲ್ಲಿ ಶೇ.25ರಷ್ಟುನ್ನು ರಾಜ್ಯ ಸರ್ಕಾರದಿಂದ ಭರಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.
ಪ್ರತಿ ಕೆಜಿ ರಾಗಿ ಹೆಲ್ತ್ ಮಿಕ್ಸ್ ಪುಡಿಗೆ 182.50 ರೂ. ದರ ನಿಗದಿಪಡಿಸಿದ್ದು, ಈ ದರದಂತೆ ವೆಚ್ಚ ಭರಿಸಬೇಕು. ಪ್ರತಿ ಮಗುವಿಗೆ 150 ಎಂ.ಎಲ್. ಬಿಸಿ ಹಾಲಿನೊಂದಿಗೆ 5 ಗ್ರಾಂ. ಪುಡಿ ಮಿಶ್ರಣ ಮಾಡಿ ನೀಡಬೇಕು ಎಂದು ಇಲಾಖೆ ಆದೇಶಿಸಿದೆ.