ಲಾಭಕ್ಕಿಂತ ವೆಚ್ಚವೇ ಅಧಿಕ : ಬೆಳೆಗಾರರ ಅಳಲು ಒಂಭತ್ತನಗುಂಟೆ ಬಳಿಯ ಕೇಂದ್ರದಲ್ಲಿ ರಾಗಿ ಖರೀದಿ ವಿಳಂಬ

6 MARCH - KUDUR RAAGI NEWS COAD 2 PHOTO
Published on

ಕುದೂರು: ಈ ವರ್ಷ ರಾಗಿಗೆ ಬಂಪರ್ ಬೆಲೆ ಸಿಕ್ಕಿದೆ. ಆದರೆ, ರಾಗಿ ಖರೀದಿ ಕೇಂದ್ರದ ಬಳಿ ರಾಗಿ ಮಾರಲು ರೈತರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಖರ್ಚುಗಳು ಹೆಚ್ಚಾಗುತ್ತಿದೆ ಎಂಬುದು ರೈತರ ಅಳಲಾಗಿದೆ.

ಮಾಗಡಿ ತಾಲೂಕಿನ ರೈತರು ತಾವು ಬೆಳೆದ ರಾಗಿಯನ್ನು ಸೋಲೂರು ಬಳಿಯ ಒಂಭತ್ತನಗುಂಟೆ ಗ್ರಾಮದ ಬಳಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ನೀಡುತ್ತಿದ್ದಾರೆ.

ಈ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿರುವುದರಿಂದ ಹೆಚ್ಚಿನ ರೈತರು ರಾಗಿಯನ್ನು ಈ ಕೇಂದ್ರದಲ್ಲೇ ಮಾರಾಟ ಮಾಡುತ್ತಿದ್ದು, ಈಗಾಗಲೇ ರಾಗಿ ಮೂಟೆಗಳನ್ನು ಹೊತ್ತಿರುವ ನೂರಾರು ಟ್ರ್ಯಾಕ್ಟರ್‌ಗಳು ಕಿಲೋ ಮೀಟರ್‌ವರೆಗೆ ಸಾಲು ಗಟ್ಟಿ ನಿಂತಿವೆ.

ಸಮಯಕ್ಕೆ ಸರಿ ಯಾಗಿ ರಾಗಿ ಪಡೆಯುತ್ತಿಲ್ಲ ಹಾಗೂ ದಿನಗಟ್ಟಲೆ ಕಾಯಬೇಕಾಗಿದೆ. ಅಲ್ಲದೆ ರಾತ್ರಿ ಹೊತ್ತಿನಲ್ಲಿ ವಾಹನಗಳಲ್ಲಿ ತಂದಿರುವ ರಾಗಿ ಮೂಟೆಗಳು ಹಾಗೂ ಟ್ರ್ಯಾಕ್ಟರ್‌ನ ಬ್ಯಾಟರಿ ಮತ್ತಿತರ ಕೈಗೆ ಸಿಗುವಂತಹ ವಸ್ತುಗಳು ಕಣ್ಮರೆಯಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ನಿಗದಿತ ಸಮಯದಲ್ಲಿ ರಾಗಿ ಖರೀದಿಸಿದರೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನುತ್ತಾರೆ ರೈತರು.

ರೈತರ ಖಾತೆಗೆ ನೇರ ಹಣ: ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಗೆ 3,295 ರೂ.ನಿಗದಿ ಮಾಡಿದ್ದು, ರೈತರ ಬೆಳೆಗೆ ಬಂಪರ್ ಬೆಲೆ ಸಿಕ್ಕಂತಾಗಿದೆ. ಆದರೆ, ಇದೇ ರಾಗಿಯನ್ನು ಖಾಸಗಿ ಮಂಡಿಗಳಲ್ಲಿ ಮಾರಾಟ ಮಾಡಿದ್ದರೆ

ಕ್ವಿಂಟಾಲ್‌ಗೆ 2ರಿಂದ ಎರಡೂವರೆ ಸಾವಿರ ಸಿಗುತ್ತಿತ್ತು. ಇಲ್ಲಿ ರಾಗಿ ಮಾರಾಟ ಮಾಡಿ ಬಂದ ಹಣ ಎರಡು ತಿಂಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಲಾಭ-ನಷ್ಟ ಎರಡೂ ಇದೆ :  ರಾಗಿ ಬೆಳೆಗೆ ಈ ಬಾರಿ ಉತ್ತಮ ಬೆಲೆ ಸಿಕ್ಕಿದೆ. ಆದರೆ, ರೈತ ರಾಗಿ ತುಂಬಲು ಬೇಕಾದ ಪ್ರತಿ ಚೀಲಕ್ಕೆ 35 ರೂ. ಆಗುತ್ತದೆ. ಇನ್ನು ಮೂಟೆಗಳನ್ನು ಖರೀದಿ ಕೇಂದ್ರಕ್ಕೆ ಸಾಗಿಸಲು ಟ್ರ್ಯಾಕ್ಟರ್ ಬಾಡಿಗೆ ಪ್ರತಿದಿನಕ್ಕೆ 3,500 ರೂ.ಗಳಾಗುತ್ತದೆ. ಅಲ್ಲದೆ ಖರೀದಿ ಕೇಂದ್ರದಲ್ಲಿ ಮೂಟೆಯನ್ನು ಇಳಿಸಲು ಪ್ರತಿ ಮೂಟೆಗೆ 7 ರೂ.ನಂತೆ ಹಣ ನೀಡಬೇಕು. ರಾಗಿ ಮಾರಾಟ ಮಾಡಲು ಖರೀದಿ ಕೇಂದ್ರ ಬಳಿ 2-3 ದಿನ ಕಾಯಬೇಕಾಗಿದೆ. ಹೀಗಾಗಿ ರೈತನಿಗೆ ಇವೆಲ್ಲವೂ ಹೊರೆಯಾಗುತ್ತಿದೆ. ಹೀಗಾಗಿ ಲಾಭದ ಆಸೆಯಿಂದ ಬಂದ ನಮಗೆ ಎಲ್ಲ ಖರ್ಚು ಕಳೆದು ಉಳಿಯುವುದಾದರೂ ಎಂದು ಪ್ರಶ್ನಸುತ್ತಿದ್ದಾರೆ ರೈತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net