ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್

1195574
Published on

ಬೆಂಗಳೂರು: ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ಕೇಳಿದಾಗ ಬಹುತೇಕರಿಗೆ ಅದನ್ನು ನಂಬಲಿಕ್ಕೇ ಸಾಧ್ಯವಾಗಿರಲಿಲ್ಲ. ಈಗಲೂ ಅವರ ಸಾವನ್ನು ಒಂದು ಅಚ್ಚರಿ ಅಥವಾ ಅನುಮಾನದಿಂದಲೇ ನೋಡುವವರು ಹಲವರಿದ್ದಾರೆ. ಇವೆಲ್ಲದರ ನಡುವೆ ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಅಪ್ಪು ಸಾವಿನ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಮಾತ್ರವಲ್ಲ, ಅಪ್ಪು ಬದುಕುಳಿಯುವ ಸಾಧ್ಯತೆಯ ಕುರಿತು ಮಾತನಾಡುತ್ತ ಸಾವಿಗೆ ಕಾರಣ ಏನು ಎಂಬ ಯೋಚನೆಯನ್ನೂ ಹೊರಹಾಕಿದ್ದಾರೆ. ಅಪ್ಪು ಸಾವು ಈಗಲೂ ನನ್ನನ್ನು ಕಾಡುತ್ತಿದೆ. ಹಾಗಂತ ನಾನು ಯಾರನ್ನೂ ದೂರುತ್ತಿಲ್ಲ ಎನ್ನುತ್ತ ಒಂದಷ್ಟು ವಿಷಯವನ್ನು ಅವರು ಹೊರಗೆಡಹಿದ್ದಾರೆ.

ಕರ್ನಾಟಕ ಟಿವಿ ಅಸೋಸಿಯೇಷನ್ ಅವರು ಜಯನಗರದ ಹೆಚ್. ಎನ್. ಕಲಾಕ್ಷೇತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ 'ಅಪ್ಪು ಅಮರ' ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್ ಮಾತನಾಡುತ್ತ, ಅಪ್ಪು ಸಾವಿಗೆ ಕಾರಣ ಏನಿರಬಹುದು ಎಂದು ಹೇಳುವ ಜತೆಗೆ ಮುಂದೆ ಅಪ್ಪು ಥರ ಬೇರೆಯವರನ್ನು ಕಳೆದುಕೊಳ್ಳಬಾರದು ಎಂದರೆ ಏನು ಮಾಡಬೇಕು ಎಂಬ ಬಗ್ಗೆ ತಮ್ಮ ಚಿಂತನೆಯನ್ನು ಹೊರಹಾಕಿದ್ದಾರೆ.

ಅಪ್ಪು ಹತ್ತಿರ ಎಲ್ಲವೂ ಇತ್ತು.. ಕೋಟ್ಯಂತರ ರೂಪಾಯಿ ದುಡ್ಡು, ಆರಾರು ಕಾರು, ಮನೆ ಇತ್ತು.. ಜನರೂ ಇದ್ರು. ಪಕ್ಕದ ಮನೆಯಲ್ಲೇ ನಾನೂ ಇದ್ದೆ. ಆದರೆ ಅವರಿಗೆ ಅವತ್ತು 46 ವರ್ಷದ ಜತೆಗೆ ಇನ್ನೊಂದೈದು ನಿಮಿಷ ಇರ್ಲಿಲ್ಲ ಎಂದು ಹೇಳುತ್ತ ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಅವತ್ತು ಆ್ಯಂಬುಲೆನ್ಸ್​ಗೆ ಫೋನ್ ಮಾಡಿ ಅದು ಬಂದು ಕರೆದುಕೊಂಡು ಹೋಗುವಷ್ಟರಲ್ಲಿ ತಡ ಆಗುತ್ತದೆ ಅಂತ ನಾವು ಕಾರಿನಲ್ಲೇ ಕರೆದುಕೊಂಡು ಹೋದೆವು. ಆದರೆ ನಾಲ್ಕು ನಿಮಿಷ ಬೇಗ ಹೋಗಲು ನಮಗೆ ಆಗಿರಲಿಲ್ಲ. ಇನ್ನೊಂದು ನಾಲ್ಕು ನಿಮಿಷ ಮೊದಲು ವಿಕ್ರಮ್ ಆಸ್ಪತ್ರೆಗೆ ತಲುಪಿದ್ದಿದ್ದರೆ ಅಪ್ಪು ಬದುಕುಳಿದಿರುತ್ತಿದ್ದ ಎಂದು ರಾಘಣ್ಣ ಹೇಳಿದ್ದಾರೆ.

ಈಗಿನ ವ್ಯವಸ್ಥೆಯಲ್ಲಿ ತುಂಬಾ ಬದಲಾವಣೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿರುವ ಅವರು, ನಾನು ಬದಲಾವಣೆಗಾಗಿ ಸರ್ಕಾರವನ್ನು ಕೇಳುತ್ತಿಲ್ಲ. ಆ ಬದಲಾವಣೆ ನಮ್ಮಲ್ಲೇ ಬರಬೇಕು, ನಮ್ಮಲ್ಲಿ ಆ ಬದಲಾವಣೆ ಮೊದಲು ಮೂಡಬೇಕು. ಅಪ್ಪುಗಾಗಿ ನಾವು ಏನು ಮಾಡಬೇಕು ಅಂತ ನಾನು ಇನ್ನೊಬ್ಬರಿಗೆ ಹೇಳುತ್ತಿಲ್ಲ. ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೇನೆ. ಅದನ್ನು ನಾವು ಮಾಡಿದರೆ ಮುಂದೆ ಅಪ್ಪು ಥರ ಇನ್ನೊಬ್ಬರನ್ನು ಕಳೆದುಕೊಳ್ಳುವುದು ತಪ್ಪುತ್ತದೆ. ನಾಳೆ ಹಾಗೆ ನಾಲ್ಕು ಜನ ಬದುಕುಳಿದರೆ ಆ ಪುಣ್ಯಾತ್ಮ ಹೋಗಿದ್ದಕ್ಕೆ ನಮ್ಮ ಅಣ್ಣ, ಮಗ, ತಮ್ಮ ಉಳಿದ ಅಂತ ಹಲವರು ಮಾತಾಡಿಕೊಳ್ಳುತ್ತಾರೆ ಎನ್ನುತ್ತ ಮುಂದೆ ಏನಾಗಬೇಕು, ಏನು ಮಾಡಬಹುದು ಎನ್ನುವ ಕುರಿತು ರಾಘಣ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವನು ಒಂದು ಕಾರಣದಿಂದ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಆ ಥರ ಇನ್ನೊಬ್ಬರಿಗೆ ಆಗದಂತೆ ನಾವು ನೋಡಿಕೊಳ್ಳಬೇಕು. ಆ್ಯಂಬುಲೆನ್ಸ್​ಗಳಲ್ಲಿ ಡಿಜಿಟಲ್ ಬೋರ್ಡ್ ಬರಬೇಕು. ಇದು ಇಂಥ ಆಸ್ಪತ್ರೆಗೆ ಹೋಗುತ್ತಿದೆ ಅಂತ ಅವುಗಳಲ್ಲಿ ಡಿಸ್​​ಪ್ಲೇ ಆಗಬೇಕು. ಆವಾಗ ಆ ಪೊಲೀಸ್​ನವರು ಆ ಮಾರ್ಗದಲ್ಲಿನ ಟ್ರಾಫಿಕ್​ ಎಲ್ಲ ಕ್ಲಿಯರ್ ಮಾಡುತ್ತಾರೆ. ಮಾತ್ರವಲ್ಲ, ಆಸ್ಪತ್ರೆಗೆ ಹೋಗುವ ಮಾರ್ಗಗಳೆಲ್ಲ ಅಗಲವಾಗಿರಬೇಕು ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net