Rajanivasa - ಏಪ್ರಿಲ್​ನಲ್ಲಿ ತೆರೆಗೆ ಬರಲಿದೆ ರಾಘವ್, ಕೃತಿಕಾ ನಟನೆಯ ರಾಜನಿವಾಸ

ರಾಜನಿವಾಸ
ರಾಜನಿವಾಸ
Published on
Rajanivasa -
ಮಿಥುನ್ ಸುವರ್ಣ ನಿರ್ದೇಶನದ, ರಾಘವ್​ ಮತ್ತು ಕೃತಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ರಾಜನಿವಾಸ. ಚಿತ್ರದ ಟ್ರೇಲರ್​ ನೋಡಿದರೆ ರಿಷಬ್​ ಶೆಟ್ಟಿಯವರ ಕಾಂತಾರ ನೆನಪಿಸುತ್ತದೆ. ಹಾಗಂತ, ಈ ಚಿತ್ರಕ್ಕೂ ಆ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ನಿರ್ದೇಶಕ ಮಿಥುನ್ ಸುವರ್ಣ ರಾಜನಿವಾಸ, ಕಾಂತಾರಕ್ಕಿಂತಲೂ ಮೊದಲೇ ತೆರೆಗೆ ಬರಬೇಕಿತ್ತು. ಆದರೆ, ವಿಷಯ ಕೃತಿ ರೂಪ ಪಡೆದು, ಸಿನಿಮಾ ಆಗಲು ಇಷ್ಟು ಸಮಯ ತೆಗೆದುಕೊಂಡಿದೆ. ಕಾಂತಾರದ ಬಳಿಕ ಬರುತ್ತಿರುವ ಕಾರಣ ಹೋಲಿಕೆಯ ಆರೋಪ ಬೇಡವೆಂದೇ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೇವೆ. ಇದು ಕೂಡ ತುಳುನಾಡಿನ ಕಥೆಯಾದ ಕಾರಣ ಸಹಜವಾಗಿಯೇ ಕೆಲ ಹೋಲಿಕೆಗಳು ಕಾಣುತ್ತವೆ. ಆದರೆ, ನಮ್ಮ ಚಿತ್ರದ ಕಥೆಯೇ ಬೇರೆ ಎಂದು ಮಾಹಿತಿ ನೀಡುತ್ತಾರೆ.
ಟ್ರೇಲರ್ ಮತ್ತು ಮೂರು ಹಾಡುಗಳು ಈಗಾಗಲೇ ಸಿನಿಪ್ರಿಯರ ಮನಗೆದ್ದಿದೆ. ಟ್ರೇಲರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಸದ್ಯ ರಾಜನಿವಾಸ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಇದೇ ತಿಂಗಳಾಂತ್ಯಕ್ಕೆ‌ ಬಿಡುಗಡೆ ದಿನಾಂಕವನ್ನು ಘೋಷಿಸುವ ಐಡಿಯಾ ಚಿತ್ರತಂಡದ್ದು. ಕನ್ನಡದ‌ ದೊಡ್ಡ ವಿತರಕ ಸಂಸ್ಥೆಗಳು ಸಿನಿಮಾ ಬಿಡುಗಡೆಗೆ ಕೇಳುತ್ತಿದ್ದಾರೆ ಮತ್ತು ತಮಿಳು, ತೆಲುಗು ಭಾಷೆಯಲ್ಲೂ ಬೇಡಿಕೆ ಇದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ ಚಿತ್ರತಂಡ.
ರಾಜ‌ನಿವಾಸದಲ್ಲಿ ನಾಯಕ ಪಾತ್ರ ನಿರ್ವಹಿಸಿ ರಾಜನಂತೆ ಮೆರೆದಾಡಿರುವವರು ರಾಘವ್. ಹಾಡು ಮತ್ತು ಹೊಡೆದಾಟದ ಗ್ಲಿಂಪ್ಸ್ ಕಂಡವರಿಗೆ ಇದೊಂದು ಮಾಸ್ ಮೂವಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಿದೆ.‌ ನಾಯಕಿಯಾಗಿ ಕೃತ್ತಿಕಾ ಮಿಂಚಿದ್ದಾರೆ. ಉಳಿದಂತೆ ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿದ್ದಾರೆ.
ರಾಜ‌ನಿವಾಸ ಚಿತ್ರವನ್ನು ಡಿಎಎಂ36ಸ್ಟುಡೀಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ‌ ಮಾಡಲಾಗಿದೆ. ದಾ. ಪಿ ಆಂಜನಪ್ಪ ನಿರ್ಮಾಪಕರು. ಸಹ ನಿರ್ಮಾಪಕರಾಗಿ ಲೋಕೇಶ್ ಗೌಡ ಬಂಡವಾಳ ಹೂಡಿದ್ದಾರೆ.‌ ಬಲರಾಜವಾಡಿ, ಯಮುನಾ ಶ್ರೀನಿಧಿ, ನೀನಾಸಂ ಅಶ್ವಥ್, ಸಹನಾ, ಪ್ರಶಾಂತ್‌ ಪ್ರಮುಖ‌ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ, ರಮೇಶ್ ರಾಜ್ ಛಾಯಾಗ್ರಹಣದಲ್ಲಿ ರಾಜನಿವಾಸ ಮೂಡಿಬರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net