ಎಚ್ಚರ.. ಬೇರೆ ಪ್ರಾಣಿಗಳು ಕಚ್ಚಿದರೂ ಬರುತ್ತದೆ ರೇಬೀಸ್!; ಬೆಕ್ಕು, ನರಿ, ತೋಳ, ಮುಂಗುಸಿ, ಹಸು, ಎಮ್ಮೆಗಳಲ್ಲೂ ಇದೆ ವೈರಸ್

Dog
Published on

| ವಿಲಾಸ ಮೇಲಗಿರಿ ಬೆಂಗಳೂರು

ಬೀದಿ ನಾಯಿಗಳಷ್ಟೇ ಅಲ್ಲ, ಬೆಕ್ಕು, ನರಿ, ತೋಳ, ಮುಂಗುಸಿ ಕಚ್ಚದಾಗಲೂ ಮನುಷ್ಯನಲ್ಲಿ ರೇಬೀಸ್ ವೈರಸ್ ಕಂಡು ಬಂದಿದೆ! ರೇಬೀಸ್ ವೈರಸ್ ಈ ಪ್ರಾಣಿಗಳಲ್ಲಿ ಜೀವಂತವಾಗಿದ್ದಾಗ ಕಚ್ಚಿದರೆ ಮನುಷ್ಯನಿಗೆ ರೇಬೀಸ್ ಕಾಯಿಲೆ ಬರುತ್ತದೆ. ಆದರೆ ಶೇ.98 ಪ್ರಕರಣಗಳಲ್ಲಿ ನಾಯಿ ಕಚ್ಚಿದಾಗಲೇ ರೇಬೀಸ್ ಕಾಣಿಸಿಕೊಳ್ಳುತ್ತದೆ.

ಬಿಡಾಡಿ ನಾಯಿಗಳು ಯಾರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸಿದರೆ ಸಂತ್ರಸ್ಥರ ಖರ್ಚು-ವೆಚ್ಚಗಳನ್ನು ಆಹಾರ ಹಾಕುವವರೇ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಮೌಖಿಕ ಅಭಿಪ್ರಾಯ ನೀಡಿರುವುದು ಬೀದಿ ನಾಯಿಗಳ ನಿಯಂತ್ರಣ ವಿಷಯ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಸಾಮಾನ್ಯವಾಗಿ ನಾಯಿಗಳಿಗೆ ಹಸಿ ತ್ಯಾಜ್ಯ, ಮಾಂಸ ತ್ಯಾಜ್ಯ ಸಿಗದೇ ಇದ್ದಾಗ ಕಚ್ಚುವ ಚಟ ಕಂಡು ಬರುತ್ತದೆ. ನಾಯಿ ಕಚ್ಚಿದ ಹಸು, ಎಮ್ಮೆಗಳಲ್ಲೂ ರೇಬೀಸ್ ಸೋಂಕು ದೃಢಪಟ್ಟಿದೆ. ಇದಕ್ಕೆ ಇದುವರೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಾಗಾಗಿ ಆಂಟಿ ರೇಬೀಸ್ ಮತ್ತು ರೇಬೀಸ್ ಇಮ್ಯೂನೋ ಗ್ಲಾಬಿನ್ ಲಸಿಕೆ ಪಡೆಯುವುದೇ ಸದ್ಯಕ್ಕಿರುವ ಮಾರ್ಗ. ನಾಯಿ ಕಚ್ಚಿದಾಗ ತಕ್ಷಣ ಎಚ್ಚರವಹಿಸಬೇಕು. ಸೂಕ್ತ ಚಿಕಿತ್ಸೆ ಪಡೆಯಲೇಬೇಕು. ರೇಬೀಸ್ ವೈರಸ್ ರಕ್ತದ ಮೂಲಕ ದೇಹ ಪ್ರವೇಶಿಸುವುದಿಲ್ಲ. ಬದಲಾಗಿ ನರಗಳ ಮೂಲಕ ಸ್ಪೈನಲ್ ಕಾರ್ಡ್ ಸೇರಿ ಅಲ್ಲಿಂದ ಮಿದುಳಿಗೆ ತಲುಪುತ್ತದೆ. ರೋಗ ಲಕ್ಷಣ ಯಾವುವೂ ಕಂಡು ಬರುವುದಿಲ್ಲ. ಮಿದುಳಿಗೆ ವೈರಸ್ ತಲುಪಿದಾಗಲೇ ರೋಗ ಗೊತ್ತಾಗುತ್ತದೆ. ಆದರೆ ನಾಯಿ ಕಚ್ಚಿದ ಮಾತ್ರಕ್ಕೆ ಎಲ್ಲ ಪ್ರಕರಣಗಳೂ ರೇಬೀಸ್ ಆಗಿರುವುದಿಲ್ಲ. ಭಾರತದಲ್ಲಿ 2004-05ನೇ ಸಾಲಿನಲ್ಲಿ 1.7 ಕೋಟಿ ನಾಯಿ ಕಚ್ಚಿದ ಪ್ರಕರಣ ವರದಿಯಾಗಿದ್ದರೆ, 18-19 ಸಾವಿರ ಪ್ರಕರಣಗಳಲ್ಲಿ ಮಾತ್ರ ರೇಬೀಸ್ ಸೋಂಕು ದೃಢಪಟ್ಟಿತ್ತು.

8 ಲಕ್ಷ ಬೀದಿ ನಾಯಿ: ರಾಜ್ಯದಲ್ಲಿ ಸುಮಾರು 8 ಲಕ್ಷ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2018-19ರ ಸರ್ವೆ ಪ್ರಕಾರ 3.08 ಲಕ್ಷ ಬೀದಿ ನಾಯಿಗಳಿವೆ. ಈ ಪೈಕಿ 1.50 ಲಕ್ಷಕ್ಕೂ ಹೆಚ್ಚು ನಾಯಿಗಳಿಗೆ ರೇಬೀಸ್ ಲಸಿಕೆ ಹಾಕಲಾಗಿದೆ. ಸಾಕು ನಾಯಿ ಮಾಲೀಕರು ಕಡ್ಡಾಯವಾಗಿ ರೇಬೀಸ್ ಲಸಿಕೆ ಹಾಕಿಸಬೇಕು. ಶೇ. 35-40 ಸಾಕು ನಾಯಿಗಳಿಗೆ ಲಸಿಕೆ ಹಾಕಿಸದೇ ಇರುವುದು ಕಂಡು ಬಂದಿದೆ.

ಮುತ್ತು ಕೊಡಬೇಡಿ: ನಾಯಿಗಳಿಗೆ ಮುತ್ತು ಕೊಡುವುದು/ಒಂದೇ ತಟ್ಟೆಯಲ್ಲಿ ಆಹಾರ ಹಂಚಿಕೊಳ್ಳುವುದು ಮಾಡಬಾರದು. ಕಿಸ್ ಕೊಟ್ಟಾಗ ಬಾಯಲ್ಲಿ ಏನಾದರೂ ಗಾಯಗಳಿದ್ದರೆ ರೇಬೀಸ್ ವೈರಸ್ ಆ ಮೂಲಕ ಮನುಷ್ಯನ ದೇಹ ಪ್ರವೇಶಿಸುತ್ತವೆ. ನಾಯಿಗೆ ಆಹಾರ ತಿನ್ನಿಸುವಾಗ ಕೈಯಲ್ಲಿ ಏನಾದರೂ ಗಾಯವಿದ್ದರೆ ಆ ಮೂಲಕವೂ ರೇಬೀಸ್ ವೈರಸ್ ಮನುಷ್ಯನ ದೇಹ ಪ್ರವೇಶಿಸುತ್ತವೆ. ಹಾಗಾಗಿ ನಾಯಿ ಮುದ್ದು ಮಾಡುವಾಗ ಬಹಳ ಎಚ್ಚರಿಕೆ ಇರಬೇಕು.

ನರಿಗಳಲ್ಲೂ ವೈರಸ್: ಹಾವೇರಿ, ಬಾಗಲಕೋಟೆ, ದಾವಣಗೆರೆಯಲ್ಲಿ ನರಿಗಳಲ್ಲಿ ರೇಬೀಸ್ ವೈರಸ್ ಇದ್ದುದು 2021-22 ರಲ್ಲೇ ದೃಢಪಟ್ಟಿದೆ. ಅಮರಾವತಿಯಲ್ಲಿ ತೋಳವೊಂದರಲ್ಲಿ ರೇಬೀಸ್ ವೈರಸ್ ಪತ್ತೆಯಾಗಿದೆ.

ಮನುಷ್ಯನಿಗೆ ನಾಯಿ ಕಚ್ಚಿದಾಗ ರೇಬೀಸ್ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ನಾಯಿ ಕಚ್ಚುವ ಪ್ರಕರಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.

| ಡಾ. ಶ್ರೀಕೃಷ್ಣ ಇಸಳೂರು ಮುಖ್ಯಸ್ಥರು, ರೇಬೀಸ್ ಪ್ರಯೋಗಾಲಯ, ಪಶುವೈದ್ಯ ಮಹಾವಿದ್ಯಾಲಯ, ಬೆಂಗಳೂರು.

ಪ್ರಥಮ ಚಿಕಿತ್ಸೆ ಏನು?

  • ನಾಯಿ ಕಚ್ಚಿದ ಸ್ಥಳವನ್ನು ಹರಿವ ನೀರಿನಿಂದ 15 ನಿಮಿಷ ತೊಳೆಯಬೇಕು.
  • ಬಟ್ಟೆ ಸೋಪು ಹಚ್ಚಿ ಗಾಯ ಶುಚಿಗೊಳಿಸಬೇಕು.
  • ಬಳಿಕ ಅಲ್ಕೋಹಾಲ್ ಹಾಕಿ ತೊಳೆಯಬೇಕು. ಇದರಿಂದ ಶೇ.90 ವೈರಸ್ ನಾಶವಾಗುತ್ತವೆ.

ಪಾಲಿಸಬೇಕಾದ ಕ್ರಮಗಳು

  • ನಿರ್ದಿಷ್ಟ ಸಮಯದಲ್ಲೇ ಆಹಾರ ಹಾಕಬಹುದು.(ಬೆಳಗಿನ ಜಾವ ಆದರೆ ಒಳ್ಳೆಯದು).
  • ಜನ ಸಂದಣಿ ಕಡಿಮೆ ಇರುವ ಸ್ಥಳಗಳಲ್ಲಿ ಆಹಾರ ಹಾಕಿ
  • ನಾಯಿಗೆ ಲಸಿಕೆ ಹಾಕಿಸಲು ಸ್ಥಳೀಯ ಆಡಳಿತಕ್ಕೆ ಸಹಕಾರ ಕೊಡಬೇಕು.

ಮಕ್ಕಳೇ ಎಚ್ಚರ

  • ಮಕ್ಕಳು ಒಬೊಬ್ಬರೇ ಓಡಾಡ ಬಾರದು.
  • ಗುಂಪು ಗುಂಪಾಗಿ ಓಡಾ ಡುವಾಗ ನಾಯಿ ಕಚ್ಚುವುದು ತೀರಾ ಕಡಿಮೆ.
  • ನಾಯಿ ದಾಳಿ ಮಾಡಿದಾಗ ತಲೆ ಕೆಳಗೆ ಮಾಡಿ ಮುಖ ಮುಚ್ಚಿಕೊಳ್ಳಬೇಕು.
  • ನಾಯಿ ಕಚ್ಚಿ ದರೆ ತಕ್ಷಣ ಶಾಲಾ ಶಿಕ್ಷಕರು/ ಪೋಷಕರ ಗಮನಕ್ಕೆ ತರಬೇಕು.

ಸಾರ್ವಜನಿಕರ ಪಾತ್ರವೇನು?

  • ಕಲ್ಲು ಹೊಡೆಯಬಾರದು.
  • ಆಹಾರ ಎಲ್ಲೆಂದರಲ್ಲಿ ಎಸೆಯಬಾರದು.
  • ಮರಿ ಹಾಕಿದಾಗ ಕೆರಳಿಸಬಾರದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net