

ನ್ಯೂಯಾರ್ಕ್: ವಿಡಿಯೋಗೋಸ್ಕರ ತನ್ನ ವಿಮಾನವನ್ನೇ ಪತನ ಮಾಡಿದ ಮಾಜಿ ಒಲಿಂಪಿಯನ್ ಹಾಗೂ ಯೂಟ್ಯೂಬರ್ ಟ್ರೆವೊರ್ ಜಾಕೋಬ್ ಅವರ ಖಾಸಗಿ ಪೈಲಟ್ ಪ್ರಮಾಣ ಪತ್ರವನ್ನು ಯುನೈಟೆಡ್ ಸ್ಟೇಟ್ಸ್ ಫೆಡರಲ್ ಅವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ರದ್ದು ಮಾಡಿದೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಸಾಮಾಜಿಕ ಜಾಲತಾಣದ ವ್ಯೂವ್ಸ್ಗಾಗಿ 2021ರಲ್ಲಿ ವಿಮಾನವನ್ನು ಪತನ ಮಾಡಿದ ಆರೋಪದಡಿಯಲ್ಲಿ ಮಿ. ಜಾಕೋಬ್ ಅವರು ತನಿಖೆಯನ್ನು ಎದುರಿಸುತ್ತಿದ್ದಾರೆ. ವಿಡಿಯೋಗೆ " ನಾನು ನನ್ನ ವಿಮಾನವನ್ನು ಪತನ ಮಾಡುತ್ತೇನೆ" ಎಂದು ಶೀರ್ಷಿಕೆ ನೀಡಿದ್ದು, ದೋಷಪೂರಿತ ಎನ್ನಲಾದ ನಾಗರಿಕ ವಿಮಾನದಿಂದ ಪ್ಯಾರಚೂಟ್ ಮೂಲಕ ಜಾಕೋಬ್ ಹೊರ ಜಿಗಿಯುವುದು ಮತ್ತು ವಿಮಾನವೂ ಕ್ಯಾಲಿಫೋರ್ನಿಯಾದಲ್ಲಿರುವ ಲಾಸ್ ಪಡ್ರೆಸ್ ರಾಷ್ಟ್ರೀಯ ಅರಣ್ಯದಲ್ಲಿ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋವೂ ವಾಯುಯಾನ ಉತ್ಸಾಹಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಜಾಕೋಬ್ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ವರದಿ ಒಂದನ್ನು ಎಫ್ಎಎ ಸಿದ್ಧಪಡಿಸಿದ್ದು, ಇಂಜಿನ್ ಫೈಲ್ ಆಗಿದೆ ಎಂದು ಜಾಕೋಬ್ ಹೇಳುವುದಕ್ಕೂ ಮುಂಚೆಯೇ ಆತ ಪ್ಯಾರಚೂಟ್ ಸಿದ್ಧಪಡಿಸಿಕೊಂಡು ವಿಮಾನದ ಎಡಗಡೆ ಇರುವ ಬಾಗಿಲನ್ನು ತೆರೆದರು. ಹೀಗಾಗಿ ಜಾಕೋಬ್ ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ವರದಿ ಹೇಳಿದೆ.
ಇದಲ್ಲದೆ, ಜಾಕೋಬ್ ಸಹಾಯಕ್ಕಾಗಿ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಿಲ್ಲ. ಅಲ್ಲದೆ, ಇಂಜಿನ್ ಅನ್ನು ಮರು ಆರಂಭಿಸುವ ಪ್ರಯತ್ನವನ್ನು ಜಾಕೋಬ್ ಮಾಡಿಲ್ಲ. ಪ್ರಯತ್ನ ಮಾಡಿದ್ದರೆ ಇಂಜಿನ್ ಫೇಲ್ ಆಗಿದ್ದರೂ ವಿಮಾನವನ್ನು ಸೇಫ್ ಆಗಿ ಲ್ಯಾಂಡ್ ಮಾಡಬಹುದಾಗಿತ್ತು ಎಂದು ಎಫ್ಎಎ ಜಾಕೋಬ್ ವಿರುದ್ಧ ವರದಿ ನೀಡಿದೆ.
ಜಾಕೋಬ್ ಅವರು ಫೆಡರಲ್ ಅವಿಯೇಷನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರ ಖಾಸಗಿ ಪೈಲಟ್ ಪ್ರಮಾಣ ಪತ್ರವನ್ನು ರದ್ದು ಮಾಡಿದೆ. ಸಂಸ್ಥೆಯ ಯಾವುದೇ ವಿಮಾನವನ್ನು ನಿರ್ವಹಿಸಲು ಇರುವ ಅನುಮತಿಯನ್ನು ಸಹ ಕೊನೆಗೊಳಿಸಿದೆ. ಆದೇಶವನ್ನು ಅನುಸರಿಸದಿದ್ದರೆ ಮುಂದಿನ ಕಾನೂನು ಜಾರಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. (ಏಜೆನ್ಸೀಸ್)