VIDEO| ದೈತ್ಯ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತು ಎಳೆದೊಯ್ದ ವ್ಯಕ್ತಿ! ಎದೆ ಝಲ್​ ಎನಿಸುವ ದೃಶ್ಯವಿದು

Python
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಕೆಲವೊಂದಿಷ್ಟು ವಿಡಿಯೋಗಳು ತುಂಬಾ ಫನ್ನಿಯಾಗಿದ್ದರೆ, ಇನ್ನೊಂದಿಷ್ಟು ನೋಡುಗರ ಹುಬ್ಬೇರಿಸುವಂತಿರುತ್ತದೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ಹಾವು ಎಂದಾಕ್ಷಣ ಮಾರುದ್ದ ಓಡುತ್ತೇವೆ. ಅದರಲ್ಲೂ ಹೆಬ್ಬಾವು ಅಂದಮೇಲೆ ಕೇಳಬೇಕಾ, ಅದರ ದೈತ್ಯಾಕಾರವನ್ನು ನೋಡಿ ಮೂರ್ಛೆ ಹೋಗಿಬಿಡುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಭಾರಿ ಗಾತ್ರದ ಹೆಬ್ಬಾವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಮೆಟ್ಟಿಲು ಹತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡಿದ್ರೆ ಒಂದು ಕ್ಷಣ ನಿಮ್ಮ ಹುಬ್ಬೇರುವುದಂತೂ ಖಂಡಿತ.

ವಿಡಿಯೋದಲ್ಲಿರುವ ವ್ಯಕ್ತಿ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತು ಮೆಟ್ಟಿಲು ಹತ್ತುತ್ತಾ ಧರ ಧರನೇ ಎಳೆದೊಯ್ಯುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ವರ್ಲ್ಡ್​ ಆಫ್​ ಸ್ನೇಕ್ಸ್​ ಹೆಸರಿನ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಮಾಡಲಾಗಿದ್ದು, 36 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಹರಿದುಬಂದಿವೆ.

ವಿಡಿಯೋಗೆ ಕಾಮೆಂಟ್​ಗಳ ಸುರಿಮಳೆ ಬಂದಿದೆ. ಎಳೆದೊಯ್ಯುವುದರಿಂದ ಹಾವಿಗೆ ಹಾನಿಯಾಗುತ್ತದೆ. ಇದು ಸರಿಯಲ್ಲ ಎಂದು ಬಳಕೆದಾರನೊಬ್ಬ ಕಾಮೆಂಟ್​ ಮಾಡಿದ್ದಾರೆ. ನೀವು ಹಾವುಗಳನ್ನು ಎಳೆದಾಗ ಹೊಟ್ಟೆಗೆ ನೋವಾಗುವುದಿಲ್ಲವೇ? ಅಯ್ಯೋ ಬಡ ಹಾವು ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟಿಸಿದರೆ, ಇನ್ನೊರ್ವ ಹಾವನ್ನು ನಿಭಾಯಿಸಬೇಕಾದ ರೀತಿ ಇದಲ್ಲ ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net