

ಮುಂಬೈ: ಮೂವರು ಮಹಿಳೆಯರು ಸ್ಥಳೀಯ ರೈಲಿನಲ್ಲಿ ಜುಟ್ಟು ಹಿಡಿದು ಕಿತ್ತಾಡಿಕೊಂಡಿರುವುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋವನ್ನು ರೋಡ್ಸ್ ಆಫ್ ಮುಂಬೈ ಹೆಸರಿನ ಟ್ವಿಟರ್ ಖಾತೆಯಲ್ಲಿ ಭಾನುವಾರ ಶೇರ್ ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೆ?
ಮಹಿಳೆಯರ ವಿಶೇಷ ಬೋಗಿಯಲ್ಲಿ ಮೂವರು ಮಹಿಳೆಯರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಕಪಾಳಕ್ಕೆ ಬಾರಿಸುತ್ತಿರುವುದು, ನಿಂದಿಸುತ್ತಿರುವುದು ಮತ್ತು ಕೂದಲನ್ನು ಹಿಡಿದು ಎಳೆದಾಡಿರುವುದು ವಿಡಿಯೋದಲ್ಲಿದೆ. ಈ ವೇಳೆ ರೈಲಿನಲ್ಲಿದ್ದ ಇತರೆ ಪ್ರಯಾಣಿಕರ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಪ್ರಯತ್ನಿಸಿದಾದರೂ ಅದು ವಿಫಲವಾಗಿದೆ. ಇನ್ನು ಕೆಲವರು ಜಗಳ ನೋಡುತ್ತಾ ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶರಿಫೈಜಾನ್ ಸೈಯದ್ ಎಂಬುವರ ಇನ್ಸ್ಟಾಗ್ರಾಂ ಖಾತೆಯಲ್ಲಿ 6 ದಿನಗಳ ಹಿಂದೆಯೇ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ವಿಡಿಯೋಗೆ ನೀಡಿರುವ ಅಡಿಬರಹದ ಪ್ರಕಾರ ಸೀಟಿಗಾಗಿ ಮೂವರು ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ.
ಸದ್ಯ ಟ್ವಿಟರ್ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈವರೆಗೂ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 4 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಇದೊಂದು ನಾಚಿಕೆಗೇಡಿನ ಘಟನೆ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ ಇದು ಮುಂಬೈ ನಗರದ ಜನರ ಪ್ರತಿದಿನದ ಹೋರಾಟದ ಪ್ರತಿಬಿಂಬವಾಗಿದೆ ಎಂದಿದ್ದಾರೆ.
ಇನ್ನು ಇಂತಹ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯು ಮುಂಬೈ ಸ್ಥಳೀಯ ರೈಲಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಮುಂಬೈ ಉಪನಗರ ರೈಲಿನ ಮಹಿಳಾ ಮೀಸಲು ಬೋಗಿಯಲ್ಲಿ ಭಾರಿ ಜಡೆ ಜಗಳ ನಡೆದಿತ್ತು. ಈ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತುರ್ಭೆ ನಿಲ್ದಾಣದಲ್ಲಿ ಸೀಟು ಖಾಲಿಯಾದಾಗ ಓರ್ವ ಮಹಿಳಾ ಪ್ರಯಾಣಿಕರು, ಎರಡನೇ ಮಹಿಳೆಗೆ ಸೀಟಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲು ಪ್ರಯತ್ನಿಸಿದರು. ಆದರೆ, ಮೂರನೇ ಮಹಿಳೆ ಕೂಡ ಅದೇ ಸೀಟಿನಲ್ಲಿ ಕುಳಿತುಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಮೂವರು ಮಹಿಳೆಯರ ನಡುವೆ ತೀವ್ರ ವಾಗ್ವಾದ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದರು. ಗಲಾಟೆ ಸಮಯದಲ್ಲಿ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದರು. ಆದರೆ, ಕೆಲ ಮಹಿಳೆಯರು ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿದ್ದು, ಪರಿಣಾಮ ಅವರು ಗಾಯಗೊಂಡರು. ಅಲ್ಲದೆ, ಮೂವರು ಮಹಿಳೆಯರಿಗೂ ಗಾಯಗಳಾಗಿತ್ತು. ಓರ್ವ ಮಹಿಳೆಯ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಯಿತು. (ಏಜೆನ್ಸೀಸ್)