

ಅಹಮದಾಬಾದ್: ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆ ಬೀಳುವುದನ್ನು ಸಾಮಾನ್ಯವಾಗಿ ನೋಡಿರುತ್ತವೆ. ಆದರೆ, ಈ ಪ್ರಕರಣದಲ್ಲಿ ನಡೆದಿರುವುದು ಅದಕ್ಕೆ ತದ್ವಿರುದ್ಧವಾದದ್ದು. ಗುಜರಾತಿನ ಪಾಲಿಟೆಕ್ನಿಕ್ ಕಾಲೇಜಿನ ಮಹಿಳಾ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಯ ಮುಂದೆ ತನ್ನ ಎರಡು ಕೈಗಳನ್ನು ಕಟ್ಟಿ, ಕೈಮುಗಿದು ಆಕೆಯ ಕಾಲಿಗೆ ಬಿದ್ದು ಕ್ಷಮೆಯಾಚಿದ್ದಾರೆ.
ಇಡೀ ಘಟನೆಯ ಹಿಂದಿರುವ ಆರೋಪಿ ಆರ್ಎಸ್ಎಸ್ನ ವಿದ್ಯಾರ್ಥಿ ಘಟಕವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಮುಖಂಡ ಎಂದು ತಿಳಿದುಬಂದಿದೆ. ಈ ಘಟನೆ ಗುರುವಾರ ಅಹಮದಾಬಾದ್ನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಎಸ್‌ಎಎಲ್ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿ ಹಾಗೂ ಎಬಿವಿಪಿ ಮುಖಂಡ ಅಕ್ಷತ್ ಜೈಸ್ವಾಲ್ ಗುರುವಾರ ಇತರೆ ಎಬಿವಿಪಿ ಸದಸ್ಯರೊಂದಿಗೆ ಪ್ರಾಂಶುಪಾಲ ಮೋನಿಕಾ ಸ್ವಾಮಿ ಅವರ ಚೇಂಬರ್‌ಗೆ ತೆರಳಿದ್ದಾನೆ. ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸಹಪಾಠಿ ವಿದ್ಯಾರ್ಥಿನಿಗೆ ಸಾಕಷ್ಟು ಹಾಜರಾತಿ ಇಲ್ಲದ ಕಾರಣಕ್ಕೆ ಆಕೆಯೊಂದಿಗೆ ಜಗಳವಾಡಿದ್ದಾನೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಜೈಸ್ವಾಲ್ ಮತ್ತು ಇತರ ಎಬಿವಿಪಿ ಸದಸ್ಯರು ಆಕೆಯ ಚೇಂಬರ್‌ನಲ್ಲಿ ಜಗಳವಾಡುತ್ತಿರುವುದು ಕಂಡುಬಂದಿದೆ. ವಾದದ ನಂತರ, ವಿದ್ಯಾರ್ಥಿನಿಯ ಮುಂದೆ ಕ್ಷಮೆಯಾಚಿಸುವಂತೆ ಪ್ರಾಂಶುಪಾಲರನ್ನು ಬಲವಂತ ಮಾಡುತ್ತಾರೆ. ಅದರಂತೆ ವಿದ್ಯಾರ್ಥಿನಿಯ ಕೈ ಜೋಡಿಸಿ ನಮಸ್ಕರಿಸುವ ಪ್ರಾಂಶುಪಾಲೆ ನಂತರ ವಿದ್ಯಾರ್ಥಿನಿಯ ಪಾದಗಳನ್ನು ಸ್ಪರ್ಶಿಸುವುದು ವಿಡಿಯೋದಲ್ಲಿದೆ.
ಎಬಿವಿಪಿಯ ಈ ನಡೆಯನ್ನು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಟೀಕಿಸಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿವೆ. ಗುರುವಿಗೆ ಗೌರವ ಕೊಡುವ ರೀತಿ ಇದೆನಾ? ಎಂಬ ಟೀಕೆಗಳು ವ್ಯಕ್ತವಾಗಿವೆ. (ಏಜೆನ್ಸೀಸ್)