

ನವದೆಹಲಿ: ಮೆಟಾ ಒಡೆತನದ ಭಾರತದ ಅತ್ಯಂತ ಜನಪ್ರಿಯ ಮಸೇಜಿಂಗ್ ವೇದಿಕೆ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ "ಕಮ್ಯೂನಿಟೀಸ್" ಹೆಸರಿನ ಹೊಸ ಫೀಚರ್ ಅನ್ನು ಪರಿಚಯಿಸಲಿದೆ. ಶೀಘ್ರದಲ್ಲಿ ಈ ಹೊಸ ಫೀಚರ್ ಜಾಗತಿಕವಾಗಿ ಎಲ್ಲ ಸ್ಮಾರ್ಟ್ಫೋನ್ಗಳಲ್ಲೂ ಲಭ್ಯವಾಗಲಿದೆ.
ಬಳಕೆದಾರರು ತಮ್ಮ ಗ್ರೂಪ್ಗಳನ್ನು ಸಂಘಟಿಸಲು ನೆರವಾಗುವಂತಹ ಹೊಸ ಫೀಚರ್ ಅನ್ನು ವಾಟ್ಸ್ಆ್ಯಪ್ ಪರೀಕ್ಷಿಸುತ್ತಿದೆ. ಇದಲ್ಲದೆ, ಮೆಸೇಜ್ಗಳಿಗೆ ಬಹು ನಿರೀಕ್ಷಿತ ಪ್ರತಿಕ್ರಿಯೆ ಒಳಗೊಂಡಂತೆ ವಾಟ್ಸ್ಆ್ಯಪ್ ಗ್ರೂಪ್ಗಳಿಗೆ ಇತರೆ ನಾಲ್ಕು ಹೊಸ ಅಪ್ಡೇಟ್ಗಳನ್ನು ವಾಟ್ಸ್ಆ್ಯಪ್ ನೀಡಲಿದೆ.
ಉದ್ಯೋಗ ಸ್ಥಳ ಹಾಗೂ ಶಾಲೆಗಳಿಗಾಗಿ ಕಾರ್ಯನಿರ್ವಹಿಸವಂತಹ ಗ್ರೂಪ್ಗಳಿಗೆ ನೆರವಾಗುವುದೇ ಹೊಸ ಫೀಚರ್ನ ಗುರಿಯಾಗಿದೆ. ವಿವಿಧ ಗ್ರೂಪ್ಗಳನ್ನು ಒಂದೇ ಸೂರಿನಡಿ ತರಲು ಈ ಫೀಚರ್ ಬಳಕೆದಾರರಿಗೆ ನೆರವಾಗಲಿದೆ. ಇದಲ್ಲದೆ, 256 ಸದಸ್ಯ ಸಾಮರ್ಥ್ಯ ಹೊಂದಿರುವ ವಾಟ್ಸ್ಆ್ಯಪ್ ಗ್ರೂಪ್ಗಳ ಸಾವಿರಾರು ಸದಸ್ಯರಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸಲು ಗ್ರೂಪ್ ಅಡ್ಮಿನ್ಗಳಿಗೆ ಕಮ್ಯೂನಿಟಿ ಫೀಚರ್ ಸಹಾಯವಾಗಲಿದೆ.
ಸದ್ಯ ಈ ಫೀಚರ್ ಬೆಟಾ ಹಂತದಲ್ಲಿದ್ದು, ಕೆಲವೇ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಫೀಚರ್ ಅನ್ನು ಉಚಿತವಾಗಿ ನೀಡಲು ಕಂಪನಿ ಯೋಜಿಸಿದೆ. ಆದರೆ, ಭವಿಷ್ಯದಲ್ಲಿ ಈ ಫೀಚರ್ ಪಡೆಯಲು ದರ ನಿಗದಿ ಮಾಡುವುದನ್ನು ತಳ್ಳಿ ಹಾಕುವಂತಿಲ್ಲ.
ಈ ಹೊಸ ಫೀಚರ್ ಕೂಡ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತದೆ. ಯಾವುದೇ ಮಾಹಿತಿ ಸೋರಿಕೆಯಾಗುವುದಿಲ್ಲ. ಬಳಕೆದಾರರ ಗೌಪ್ಯತೆಯನ್ನು ಗೌರವಿಸುತ್ತದೆ ಎಂದು ವಾಟ್ಸ್ಆ್ಯಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ತಿಳಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಈ ಫೀಚರ್ ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಕಮ್ಯೂನಿಟಿ ಫೀಚರ್ ಮಾತ್ರವಲ್ಲದೆ, ವ್ಯಾಟ್ಸ್ಆ್ಯಪ್ ಶೀಘ್ರದಲ್ಲೇ ಈ ಕೆಳಕಂಡ ನಾಲ್ಕು ಹೊಸ ಫೀಚರ್ಗಳನ್ನೂ ಪರಿಚಯಿಸಲಿದೆ
1. ಚಾಟ್ಸ್ ಮೇಲಿನ ಸಂದೇಶಗಳಿಗೆ ವಿಭಿನ್ನ ಎಮೋಜಿಗಳು
2. ಎಲ್ಲ ಬಳಕೆದಾರರ ಚಾಟ್ಸ್ನಲ್ಲಿರುವ ಸಮಸ್ಯಾತ್ಮಕ ಸಂದೇಶಗಳನ್ನು ಗ್ರೂಪ್ ಅಡ್ಮಿನ್ ಡಿಲೀಟ್ ಮಾಡುವ ಅವಕಾಶ
3. ಫೈಲ್ ಶೇರ್ ಮಾಡುವ ಗಾತ್ರವನ್ನು 2ಜಿಬಿವರೆಗೂ ವಿಸ್ತರಣೆ
4. 32 ಜನರಿಗೆ ಒನ್ ಟ್ಯಾಪ್ ಧ್ವನಿ ಕರೆಗಳು