

ಹೈದರಾಬಾದ್: ಧಾನ್ಯ ಖರೀದಿ ವಿಚಾರದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಟಿಆರ್ಎಸ್ನ ಎಲ್ಲ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೇಂದ್ರ ಧೋರಣೆಯನ್ನು ಖಂಡಿಸಿ ಪ್ರತಿಭಟಿಸಿದ್ದಾರೆ.
ಆರ್ಮರ್ ಕ್ಷೇತ್ರದ ಶಾಸಕ ಜೀವನ್ ರೆಡ್ಡಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ವೇಳೆ ಅವರು ಗ್ಯಾಸ್ ಸಿಲಿಂಡರ್ ಅನ್ನು ತಲೆಯ ಮೇಲೆ ಹೊತ್ತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಸಿಲಿಂಡರ್ ದರ ಏರಿಕೆಯನ್ನು ಖಂಡಿಸಿದರು. ಆದಾಗ್ಯೂ ತಾವು ಧರಿಸಿದ್ದ ಟೀ-ಶರ್ಟ್ನಿಂದ ಜೀವನ್ ರೆಡ್ಡಿ ಟ್ರೋಲ್ ಕೂಡ ಆಗಿದ್ದಾರೆ. ಅವರು ಧರಿಸಿದ್ದ ಟೀ-ಶರ್ಟ್ ಅನ್ನು ಗುರಿಯಾಗಿಸಿ ಪ್ರತಿಪಕ್ಷದ ನಾಯಕರು ಟೀಕೆಗಳ ಸುರಿಮಳೆಗೈದಿದ್ದಾರೆ.
ಅಂದಹಾಗೆ ಜೀವನ್ ರೆಡ್ಡಿ ಧರಿಸಿದ್ದು ಬಲ್ಮೇನ್ ಪ್ಯಾರೀಸ್ ಕಂಪನಿ ಟಿ ಶರ್ಟ್ಸ್. ಅದೇ ಹೆಸರಿನ ಸುಳಿವಿನಿಂದ ಈ ಕಾರ್ಮರ್ಸ್ ಕಂಪನಿ ಮೂಲಕ ಬಲ್ಮೇನ್ ಪ್ಯಾರೀಸ್ ಶರ್ಟ್ ಬೆಲೆಯನ್ನು ಹುಡುಕಾಡಿದಾಗ ಅದರ ಮೇಲೆ ನೋಡಿ ಎಲ್ಲರೂ ದಂಗಾಗಿದ್ದಾರೆ. ಟೀ-ಶರ್ಟ್ ಬೆಲೆ ಬರೋಬ್ಬರಿ 547 ಡಾಲರ್. ಭಾರತೀಯ ಕರೆನ್ಸಿ ಪ್ರಕಾರ 42 ಸಾವಿರ ರೂಪಾಯಿ.
ಟೀ-ಶರ್ಟ್ ಬೆಲೆ ಇರುವ ಸ್ಕ್ರೀನ್ ಶಾಟ್ಸ್ ತೆಗೆದು ಇದೀಗ ಜೀವನ ರೆಡ್ಡಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 42 ಸಾವಿರ ಬೆಲೆ ದುಬಾರಿ ಟೀ-ಶರ್ಟ್ ಹಾಕೊಂಡು 50 ರೂಪಾಯಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿದ್ದಾರೆ.
ಅಂದಹಾಗೆ ಮಾರ್ಚ್ 22ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಜತೆಗೆ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಗ್ರಾಹಕರಲ್ಲಿ ಅಸಮಾಧಾನ ಶುರುವಾಗಿದೆ. (ಏಜೆನ್ಸೀಸ್)