ಪತಿಯಿಂದ ಪತ್ನಿಯ ಹತ್ಯೆ: ಶವದ ಮುಂದೆ ಸೆಲ್ಫಿ, ವಾಟ್ಸ್​ಆ್ಯಪ್ ನೋಡಿ ಬೆಚ್ಚಿಬಿದ್ದ ಸ್ನೇಹಿತರು!​

AP Man wife
Published on

ವಿಜಯವಾಡ: ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಬಡವೇಲು ಪಟ್ಟಣದ ಸುಂದರಯ್ಯ ಕಾಲನಿಯಲ್ಲಿ ನಡೆದಿದೆ.

ಮಂಜುಳಾ (23) ಮೃತ ದುರ್ದೈವಿ. ಈಕೆ ವಿಶಾಖಪಟ್ಟಣಂ ಜಿಲ್ಲೆಯ ಜಮ್ಮಲಮಡುಗು ಪಟ್ಟಣದ ನಿವಾಸಿ. ನಾಗರಾಜು ಎಂಬಾತನೊಂದಿಗೆ ಮದುವೆ ಆಗಿತ್ತು. ಕೆಲವೊಂದು ಸಮಸ್ಯೆಗಳಿಂದಾಗಿ ಮದುವೆ ಆದ ಒಂದೇ ತಿಂಗಳಲ್ಲಿ ಇಬ್ಬರ ಸಂಬಂದ ಮುರಿದು ಬಿದ್ದಿತ್ತು. ಇದರ ನಡುವೆ ಮಂಜುಳಾ ಕೆಲಸದ ಮೇಲೆ ಕುವೈತ್​ಗೆ ತೆರಳಿದಳು.

ಕಳೆದ 8 ತಿಂಗಳ ಹಿಂದೆ ಮುಂಜುಳಾ ಜಮ್ಮಲಮಡುಗು ಪಟ್ಟಣಕ್ಕೆ ಮರಳಿದ್ದಳು. ಇದೇ ವೇಳೆ ತನ್ನ ದೂರದ ಸಂಬಂಧಿ ಹರಿ ಎಂಬ ಯುವಕನೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಕಳೆದ ನವೆಂಬರ್​ನಲ್ಲಿ ಇಬ್ಬರ ಮದುವೆ ಸಹ ನಡೆದಿತ್ತು.

ಹರಿ ಕಡಪ ಜಿಲ್ಲೆಯಲ್ಲಿ ಕಪುರಾಮಂಟುವಿನಲ್ಲಿ ಪೇಂಟರ್​ ಆಗಿ ಕೆಲಸ ಮಾಡುತ್ತಿದ್ದ. ಮೊದಲೇ ಮದ್ಯ ವ್ಯಸನಿ ಆಗಿದ್ದ ಹರಿ, ಮಂಜುಳಾ ಮೇಲೆ ಅನುಮಾನ ವ್ಯಕ್ತಪಡಿಸಿ ಕಿರುಕುಳ ನೀಡಲು ಶುರು ಮಾಡಿದ್ದ. ಹರಿ ತಾಯಿಯು ಸಹ ಆತನೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದಳು.

ಇಬ್ಬರ ನಡುವಿನ ಜಗಳ ಹೀಗೆ ಮುಂದುವರಿದಿತ್ತು. ಇಬ್ಬರು ಒಂದೇ ಕಡೆ ಇದ್ದರೆ ಕಿತ್ತಾಟ ಕಡಿಮೆ ಆಗಬಹುದು ಅಂತಾ ಇಬ್ಬರನ್ನು ಬಡವೇಲು ಪಟ್ಟಣದ ಸುಂದರಯ್ಯ ಕಾಲನಿಗೆ ಸ್ಥಳಾಂತರ ಮಾಡಲಾಗಿತ್ತು. ಹೀಗಿದ್ದರೂ ಶುಕ್ರವಾರ ರಾತ್ರಿ ಹರಿ ಮತ್ತು ಮಂಜುಳಾ ನಡುವೆ ಮತ್ತೆ ಜಗಳ ನಡೆದಿದೆ. ಕಿತ್ತಾಟ ಮುಂದುವರಿದು ತಾರಕಕ್ಕೇರಿ ನಿಯಂತ್ರಣ ಕಳೆದುಕೊಂಡ ಹರಿ ಅದೇ ದಿನ ಮಧ್ಯರಾತ್ರಿ ಅಥವಾ ಶನಿವಾರ ಬೆಳಗ್ಗೆ 1 ಗಂಟೆ ಸುಮಾರಿಗೆ ಮಂಜುಳಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಪಾರ್ಟಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇದಾದ ಬಳಿಕ ತಾನೂ ಸಹ ಎಡಭಾಗದ ಎದೆಗೆ ಚುಚ್ಚಿಕೊಳ್ಳುವ ಮೂಲಕ ಆತ್ಮಹತ್ಯೆಯ ನಾಟಕವಾಡಿದ್ದಾನೆ. ಮರುದಿನ ಬೆಳಗ್ಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಶವದ ಜತೆ ಸೆಲ್ಫಿ ತೆಗೆದುಕೊಂಡು ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ವಾಟ್ಸ್​ಆ್ಯಪ್​ ಮಾಡಿದ್ದಾನೆ. ಬಳಿಕ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ, ಮಂಜುಳಾ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಘಟನೆ ಸಂಬಂಧ ಮಂಜುಳಾ ತಾಯಿ ದೂರು ನೀಡಿದ್ದು, ಇದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net