More

    ಪಿಎಂ ಕೊಟ್ರೂ ಜನರಿಗೆ ಸಿಗ್ತಿಲ್ಲ!: ಧೂಳು ಹಿಡಿದಿವೆ ಕೇಂದ್ರದಿಂದ ಬಂದ ವೆಂಟಿಲೇಟರ್​ಗಳು

    | ರಮೇಶ ದೊಡ್ಡಪುರ ಬೆಂಗಳೂರು

    ಮಹಾಮಾರಿ ಕರೊನಾ ಸೋಂಕಿನಿಂದ ಸಾರ್ವಜನಿಕರು ನರಳಿ ಸಾಯಬಾರದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಒತ್ತಾಸೆಯಿಂದ ಪಿಎಂ-ಕೇರ್ಸ್ ನಿಧಿ ಮೂಲಕ ರಾಜ್ಯಕ್ಕೆ ನೀಡಲಾಗಿರುವ ವೆಂಟಿಲೇಟರ್​ಗಳು ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಧೂಳು ಹಿಡಿಯುತ್ತಿವೆ. ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದು ಸಾವಿರಾರು ಉಪಕರಣ ತರಿಸಿಕೊಂಡಿರುವ ರಾಜ್ಯಾಡಳಿತ, ಸೂಕ್ತ ಸಿಬ್ಬಂದಿ ನೇಮಿಸಿಕೊಂಡು ಸಮರ್ಪಕ ರೀತಿಯಲ್ಲಿ ಬಳಸಲು ವಿಫಲವಾಗಿದೆ. ವೆಂಟಿಲೇಟರ್ ಸಹಿತ ಹಲವು ಉಪಕರಣಗಳನ್ನು ಹಂಚಿಕೆ ಮಾಡಿರುವ ರಾಜ್ಯದ ಅಧಿಕಾರಿಗಳು, ಅದರ ಅಳವಡಿಕೆ ಹಾಗೂ ಸಿಬ್ಬಂದಿ ತರಬೇತಿಗೆ ಆಸಕ್ತಿ ನೀಡಿಲ್ಲ.

    ಕರೊನಾ ಸಂಕಷ್ಟ ಎದುರಾಗುವುದಕ್ಕೂ ಮುನ್ನ ದೇಶದ ಒಟ್ಟು ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಕೇವಲ 17,850 ವೆಂಟಿಲೇಟರ್​ಗಳಿದ್ದವು. ಆದರೆ, ಕರೊನಾ ಸಂಕಷ್ಟದಿಂದ ಜನರನ್ನು ಪಾರು ಮಾಡಲು ವೆಂಟಿಲೇಟರ್ ಉತ್ಪಾದನೆ ಹೆಚ್ಚಿಸುವಂತೆ ದೇಶದ ಕಂಪನಿಗಳಿಗೆ ಪ್ರಧಾನಿ ಮೋದಿ ಕರೆ ನೀಡಿದರು. ವಾರ್ಷಿಕ ಕೇವಲ 6 ಸಾವಿರದಷ್ಟಿದ್ದ ವೆಂಟಿಲೇಟರ್ ಉತ್ಪಾದನೆ ಪ್ರಮಾಣ 2020ರ ಮೇ ಹಾಗೂ ಜೂನ್ ತಿಂಗಳಲ್ಲೇ 50 ಸಾವಿರಕ್ಕೆ ಏರಿತು. ಕೇಂದ್ರ ಸರ್ಕಾರ ಈ ಕಾರ್ಯಕ್ಕೆ ಪಿಎಂ ಕೇರ್ಸ್ ನಿಧಿಯಿಂದ 2 ಸಾವಿರ ಕೋಟಿ ರೂ. ಮೀಸಲಿಟ್ಟಿತ್ತು. ಕರೊನಾಗೂ ಮುನ್ನ ಕರ್ನಾಟಕದ ಸರ್ಕಾರಿ ವ್ಯವಸ್ಥೆಯಲ್ಲಿ 1,743 ವೆಂಟಿಲೇಟರ್​ಗಳಿದ್ದವು. ಜುಲೈ-ಆಗಸ್ಟ್ ವೇಳೆಗೆ ರಾಜ್ಯಕ್ಕೆ ಸುಮಾರು 2,100 ವೆಂಟಿಲೇಟರ್​ಗಳು ಲಭಿಸಿದವು. ಆದರೆ, ಅಧಿಕಾರಿಗಳ ಪ್ರಕಾರ ಆ ಸಮಯದಲ್ಲಿ ಬಳಕೆ ಮಾಡಿದ್ದು 100-150 ವೆಂಟಿಲೇಟರ್ ಮಾತ್ರ. ಸಾವಿರಾರು ವೆಂಟಿಲೇಟರ್​ಗಳು ಆರು ತಿಂಗಳು ಕಳೆದರೂ ಪ್ಯಾಕ್ ತೆರೆಯದೆ ಜಿಲ್ಲಾ ಆರೋಗ್ಯ ಇಲಾಖೆ ಗೋದಾಮುಗಳಲ್ಲಿ ಬಿದ್ದಿದ್ದವು.

    ನಿರ್ವಹಣೆಗೆ ಟೆಕ್ನೀಷಿಯನ್ಸ್ ಇಲ್ಲ: ಹಾಸನ, ದಕ್ಷಿಣ ಕನ್ನಡ, ಧಾರವಾಡ ಸೇರಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ವೆಂಟಿಲೇಟರ್​ಗಳನ್ನು ಶೀಘ್ರವಾಗಿ ಸ್ಥಾಪಿಸಿ ಕಾರ್ಯಾರಂಭ ಮಾಡಲಾಯಿತು. ಆದರೆ, ಅನೇಕ ಜಿಲ್ಲಾ ಗೋದಾಮುಗಳಲ್ಲಿ ವ್ಯರ್ಥವಾಗಿ ವೆಂಟಿಲೇಟರ್​ಗಳು ಬಿದ್ದಿದ್ದವು. ಇದನ್ನು ಕಂಡ ಅಧಿಕಾರಿಗಳು, ರಾಜ್ಯದಲ್ಲಿರುವ 146 ತಾಲೂಕು ಆಸ್ಪತ್ರೆಗಳಿಗೆ ತಲಾ ಮೂರರಂತೆ ಕಣ್ಣುಮುಚ್ಚಿ ಹಂಚಿಕೆ ಮಾಡಿದರು. ಅದನ್ನು ಕಡ್ಡಾಯವಾಗಿ 2020ರ ಸೆ.19ರೊಳಗೆ ಕಾರ್ಯಾರಂಭ ಮಾಡಿ ಎಂದು ಆದೇಶ ಹೊರಡಿಸಿ ಸುಮ್ಮನಾದರು. ಮತ್ತೆ ಕೆಲವು ಸಂದರ್ಭದಲ್ಲಿ ಒಂದು-ಎರಡರಂತೆ ತಾಲೂಕು ಆಸ್ಪತ್ರೆಗಳಿಗೆ ರವಾನೆ ಮಾಡಲಾಯಿತು. ನಂತರ ಕರೊನಾ ಸೋಂಕು ಕಡಿಮೆಯಾದಾಗಲೂ ಇತ್ತ ಗಮನ ನೀಡಲಿಲ್ಲ.

    ಕಲಬುರಗಿಯಲ್ಲಿ ಪಿಎಂ ಕೇರ್ಸ್​ನಿಂದ ಬಂದಿರುವ ವೆಂಟಿಲೇಟರ್ಸ್​ಗಳನ್ನು 6 ತಾಲೂಕಿಗೆ ತಲಾ ಐದರಂತೆ ವಿತರಿಸಲಾಗಿದೆ. ಆದರೆ, ಟೆಕ್ನೀಷಿಯನ್ಸ್ ಕೊರತೆಯಿಂದ ನಿರ್ವಹಣೆ ಆಗುತ್ತಿಲ್ಲ. ವಿಜಯಪುರದಲ್ಲಿ ವೆಂಟಿಲೇಟರ್ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿ ಇಲ್ಲ. ಚಿತ್ರದುರ್ಗ ಜಿಲ್ಲೆಯ ತಾಲೂಕು ಆಸ್ಪತ್ರೆಗಳಿಗೆ ಪೂರೈಕೆಯಾಗಿರುವ 15ರಲ್ಲಿ 8ನ್ನು ಮಾತ್ರ ಇಲ್ಲಿವರೆಗೆ ಅಳವಡಿಸಲಾಗಿದೆ. ಕೇಂದ್ರದಿಂದ ಸಿಕ್ಕ ಸಾವಿರಾರು ವೆಂಟಿಲೇಟರ್​ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಿ ಸಿಬ್ಬಂದಿ ನೇಮಕ ಮಾಡಿದ್ದರೆ ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಕನಿಷ್ಠ 5 ವೆಂಟಿಲೇಟರ್ ಹಾಸಿಗೆಗಳು ಇರುತ್ತಿದ್ದವು.

    ಜಿಲ್ಲಾಸ್ಪತ್ರೆಗಳಲ್ಲೂ ನಿರ್ವಹಣೆ ಇಲ್ಲ: ಅನೇಕ ಜಿಲ್ಲಾ ಆಸ್ಪತ್ರೆಗಳಲ್ಲೂ ವೆಂಟಿಲೇಟರ್​ಗಳ ಸ್ಥಿತಿ ಚಿಂತಾಜನಕವಾಗಿದೆ. ಬೀದರ್, ವಿಜಯಪುರ, ಕೊಡಗು, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ ಸೇರಿ ಅನೇಕ ಜಿಲ್ಲೆಗಳಲ್ಲಿ ಕೆಲ ವೆಂಟಿಲೇಟರ್​ಗಳು ಮಾತ್ರ ಅಳವಡಿಕೆ ಆಗಿವೆ. ಅವುಗಳೂ ತಂತ್ರಜ್ಞರ ಕೊರತೆಯಿಂದಾಗಿ ಕಾರ್ಯನಿರ್ವಹಣೆ ಆಗುತ್ತಿಲ್ಲ. ಆದರೆ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಗದಗ, ಧಾರವಾಡ, ರಾಯಚೂರು, ಬಳ್ಳಾರಿ ಸೇರಿ ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರ ಪಿಎಂ ಕೇರ್ಸ್ ವೆಂಟಿಲೇಟರ್​ಗಳ ಬಳಕೆ ಸಮರ್ಪಕವಾಗಿದೆ. ಆದರೆ, ತಾಲ್ಲೂಕುಗಳಲ್ಲಿ ಪರಿಸ್ಥಿತಿ ನಿರೀಕ್ಷಿತ ಮಟ್ಟದಲ್ಲಿಲ್ಲ.

    ಬೆಂಗಳೂರಿನಲ್ಲಿ ಎರಡು ಹೆಚ್ಚಳ!: ಕಳೆದ ವರ್ಷ ಬಿಬಿಎಂಪಿ ವರದಿಗಳಲ್ಲಿ ನಮೂದಿಸಿದಂತೆ ಹದಿಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ 77 ಹಾಗೂ ಮೂರು ವೈದ್ಯಕೀಯ ಕಾಲೇಜುಗಳಲ್ಲಿ 22 ಐಸಿಯು ಸೇರಿ ಒಟ್ಟು 99 ವೆಂಟಿಲೇಟರ್​ಗಳಿದ್ದವು. ಇದೀಗ ಬಿಬಿಎಂಪಿ ಆನ್​ಲೈನ್ ಹಾಸಿಗೆ ಲಭ್ಯತೆ ಪೋರ್ಟಲ್​ನಲ್ಲಿ ತಿಳಿಸರುವಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ 79 ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 22 ಸೇರಿ 101 ಐಸಿಯು ವೆಂಟಿಲೇಟರ್​ಗಳಿವೆ. ಅಂದರೆ ಇಡೀ ವರ್ಷದಲ್ಲಿ ಬಿಬಿಎಂಪಿ ಕೇವಲ 2 ವೆಂಟಿಲೇಟರ್​ಗಳನ್ನು ಮಾತ್ರ ಹೆಚ್ಚಳ ಮಾಡಿಕೊಂಡಿದೆ. ಈ ಪೈಕಿ ಆರು ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೂ ಐಸಿಯು ವೆಂಟಿಲೇಟರ್ ಇಲ್ಲ.

    ಖಾಸಗಿಗೆ ಪರಭಾರೆ ಉದ್ದೇಶ ವಿಫಲ: ಕೇಂದ್ರದಿಂದ ಬಂದ ವೆಂಟಿಲೇಟರ್​ಗಳನ್ನು ಒಪ್ಪಂದದ ಮೇಲೆ ಖಾಸಗಿ ಸಂಸ್ಥೆಗಳು ಪಡೆದು ಕರೊನಾ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಬಹುದು ಎಂದು ಸರ್ಕಾರ ಮುಕ್ತ ಆಹ್ವಾನ ನೀಡಿತ್ತು. ಆದರೆ ಸಿಬ್ಬಂದಿ ಕೊರತೆ ಕಾರಣಕ್ಕೆ ಖಾಸಗಿಯವರು ಹೆಚ್ಚು ಆಸಕ್ತಿ ತೋರದ ಕಾರಣ ಬೆರಳೆಣಿಕೆಯಷ್ಟು ಖಾಸಗಿಯವರು ಮಾತ್ರ ಇದನ್ನು ಪಡೆದರು. ನಂತರ ಉಳಿದ ವೆಂಟಿಲೇಟರ್​ಗಳನ್ನು ತಾಲೂಕು ಆಸ್ಪತ್ರೆಗಳಿಗೆ ಹಂಚಿ ಸುಮ್ಮನೆ ಕೂರಲಾಯಿತು.

    ನಮ್ಮಲ್ಲಿ ಎಲ್ಲ ಸರಿಯಿದೆ ಎನ್ನುವ ಅಧಿಕಾರಿಗಳು: ಎಲ್ಲ ತಾಲ್ಲೂಕುಗಳಲ್ಲಿ ವೆಂಟಿಲೇಟರ್ ಬಳಕೆ ಮಾಡಲಾ ಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರಾದರೂ ವಾಸ್ತವ ಸ್ಥಿತಿ ಬೇರೆ ಇದೆ. ಏಪ್ರಿಲ್ ಅಂತ್ಯದಲ್ಲಿ ಕೋಲಾರ ಜಿಲ್ಲಾಸ್ಪತ್ರೆ ಯಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ಸೋಂಕಿತರು ಮೃತಪಟ್ಟಾಗ ಅಲ್ಲಿಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತೆರಳಿದ್ದರು. ಆಸ್ಪತ್ರೆಯಲ್ಲಿರುವ 40 ವೆಂಟಿಲೇಟರ್​ಗಳನ್ನು ಬಳಕೆ ಮಾಡುತ್ತಿಲ್ಲ ಎಂದು ಸ್ವತಃ ಸಚಿವರೇ ತಿಳಿಸಿ, ನಿರ್ಲಕ್ಷ್ಯದ ಆರೋಪದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ, ಎಂಆರ್​ಒರನ್ನು ಅಮಾನತು ಮಾಡಿದ್ದರು. ಇದೇ ವೇಳೆ ಮೈಸೂರಿನ ಹೆಗ್ಗಡದೇವನಕೋಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಆರು ವೆಂಟಿಲೇಟರ್​ಗಳು ಬಳಕೆ ಆಗುತ್ತಿಲ್ಲ ಎಂದು ಮೂರು ದಿನದ ಹಿಂದಷ್ಟೆ ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದ್ದು, ವಾಸ್ತವಕ್ಕೆ ಹಿಡಿದ ಕನ್ನಡಿ.

    ತಂತ್ರಜ್ಞರ ಪ್ರಾಮುಖ್ಯತೆ: ವೆಂಟಿಲೇಟರ್​ಗಳನ್ನು ಸಾಮಾನ್ಯ ವೈದ್ಯಕೀಯ ಸಿಬ್ಬಂದಿ ನೇರವಾಗಿ ಬಳಕೆ ಮಾಡಲಾಗದು. ಸ್ವಲ್ಪ ಅಜಾಗರೂಕತೆ ಅಥವಾ ತಿಳುವಳಿಕೆಯ ಕೊರತೆಯೂ ಪ್ರಾಣಾಪಾಯ ತಂದೊಡ್ಡಬಲ್ಲದು. ಐಸಿಯು ವೆಂಟಿಲೇಟರ್ ವ್ಯವಸ್ಥೆ ನಿಗಾ ವಹಿಸುವ ತಂತ್ರಜ್ಞರಿಗೆ ಇಂಟೆನ್ಸಿವಿಸ್ಟ್ ಎನ್ನಲಾಗುತ್ತದೆ. ಪ್ರತ್ಯೇಕ ಅರ್ಹತೆಯ ಇಂಟೆನ್ಸಿವಿಸ್ಟ್ ನೇಮಕ ಮಾಡುವುದಷ್ಟೆ ಅಲ್ಲದೆ, ಈಗಾಗಲೆ ಇರುವ ಸಿಬ್ಬಂದಿಗೆ ಸರ್ಕಾರದಿಂದ ತರಬೇತಿ ನೀಡಬೇಕಾಗುತ್ತದೆ. ಜತೆಗೆ ವೆಂಟಿಲೇಟರ್​ಗಳನ್ನು ಸ್ಕಾ್ಯನ್​ರೇ ಸೇರಿ ಹತ್ತಾರು ಸಂಸ್ಥೆಗಳು ಉತ್ಪಾದಿಸುತ್ತವೆ. ಪ್ರತಿ ಕಂಪನಿಯ ವೆಂಟಿಲೇಟರ್ ಬಳಕೆಯಲ್ಲಿ ಅನೇಕ ವ್ಯತ್ಯಾಸಗಳಿರುತ್ತವೆ. ಕಂಪನಿಯಿಂದಲೇ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಕೆಲವು ಕಡೆಗಳಲ್ಲಿ ತರಬೇತಿ ನಡೆದಿದೆ ಎಂಬುದನ್ನು ಬಿಟ್ಟರೆ ಸಾರ್ವತ್ರಿಕವಾಗಿ ಆಗಿಲ್ಲ.

    ಜಿಲ್ಲಾವಾರು ವೆಂಟಿಲೇಟರ್ ಸ್ಥಿತಿ

    ಕಲಬುರಗಿ: 6 ತಾಲೂಕಿಗೆ ತಲಾ 5ರಂತೆ ವಿತರಿಸಲಾಗಿದೆ. ಟೆಕ್ನೀಷಿಯನ್ಸ್ ಕೊರತೆಯಿಂದ ನಿರ್ವಹಣೆ ಇಲ್ಲ.

    ಯಾದಗಿರಿ: ಹೊಸ ಜಿಲ್ಲಾಸ್ಪತ್ರೆಯಲ್ಲಿ 16 ವೆಂಟಿಲೇಟರ್​ಗಳಿದ್ದು, ಹೆಚ್ಚುವರಿ 10 ತರಿಸಲಾಗುತ್ತಿದೆ.

    ಬೀದರ್: ಬ್ರಿಮ್ಸ್ನಲ್ಲಿ 72 ವೆಂಟಿಲೇಟರ್ ಇವೆ. 20 ಪಿಎಂ ಕೇರ್ಸ್​ನಿಂದ ಬಂದಿವೆ. ಸದ್ಯ 65 ವೆಂಟಿಲೇಟರ್ ಕೆಲಸ ಮಾಡುತ್ತಿದ್ದು, ಉಳಿದವು ಸ್ಥಗಿತ.

    ದಕ್ಷಿಣ ಕನ್ನಡ: 30 ವೆಂಟಿಲೇಟರ್ಸ್ ನೀಡಲಾಗಿದ್ದು, ಎಲ್ಲವೂ ಬಳಕೆಯಾಗುತ್ತಿವೆ.

    ವಿಜಯಪುರ: ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣೆಗೆ 12 ಸಿಬ್ಬಂದಿ ಕೊರತೆ ಇದೆ. ಸದ್ಯಕ್ಕೆ ನಾಲ್ಕು ಜನ ಮಾತ್ರ ಇದ್ದು ಪಾಳಿ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕು ಕೇಂದ್ರಗಳಲ್ಲೂ ಇದೇ ಸ್ಥಿತಿ.

    ಕೊಡಗು: ಪಿಎಂ ಕೇರ್ಸ್​ನಿಂದ ನೀಡಿರುವ 10 ವೆಂಟಿಲೇಟರ್​ಗಳ ನಿರ್ವಹಣೆಗೆ ತಂತ್ರಜ್ಞರು ಇಲ್ಲದೆ ಬಳಕೆಗೆ ಬಾರದೆ ಉಳಿದುಕೊಂಡಿವೆ.

    ಹಾಸನ: ಹಿಮ್ಸ್​ಗೆ ಪಿಎಂ ಕೇರ್ಸ್ ನಿಧಿಯಿಂದ ಕಳೆದ ವಾರ 10 ವೆಂಟಿಲೇಟರ್ ತಲುಪಿವೆ. ತಾಲ್ಲೂಕುಗಳಿಗೆ ವೆಂಟಿಲೇಟರ್ ಹಂಚಿಕೆ ಮಾಡಲಾಗಿದ್ದು, ಆಪರೇಟರ್ ಹುದ್ದೆ ಭರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೂಚನೆ ನೀಡಿದ್ದಾರೆ.

    ಮಂಡ್ಯ: ಮಿಮ್ಸ್​ಗೆ ಪಿಎಂ ಕೇರ್ಸ್ ನಿಧಿಯಿಂದ ಈ ಹಿಂದೆ 36 ವೆಂಟಿಲೇಟರ್ ಹಾಗೂ ತಾಲೂಕು ಆಸ್ಪತ್ರೆಗಳಿಗೆ ತಲಾ 3 ವೆಂಟಿಲೇಟರ್ ನೀಡಲಾಗಿದ್ದು, ಎಲ್ಲವನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ.

    ಮೈಸೂರು: ಜಿಲ್ಲಾಸ್ಪತ್ರೆಯನ್ನು ನೂತನವಾಗಿ ನಿರ್ವಿುಸಲಾಗಿದ್ದು, ಅದನ್ನು ಈಗ ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಅಲ್ಲಿ ವೆಂಟಿಲೇಟರ್​ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ.

    ಚಾಮರಾಜನಗರ: ಜಿಲ್ಲಾಸ್ಪತ್ರೆಗೆ ಪಿಎಂ ಕೇರ್ಸ್​ನಿಂದ 13 ವೆಂಟಿಲೇಟರ್​ಗಳನ್ನು ನೀಡಲಾಗಿದ್ದು, ತಾಲೂಕು ಆಸ್ಪತ್ರೆ ಸೇರಿ ಉಳಿದ ಕಡೆಗಳಲ್ಲಿ 19 ವೆಂಟಿಲೇಟರ್​ಗಳು ಇವೆ. ಎಲ್ಲವೂ ಉಪಯೋಗದಲ್ಲಿವೆ.

    ಹಾವೇರಿ: ಪಿಎಂ ಕೇರ್ಸ್​ನಿಂದ 20 ವೆಂಟಿಲೇಟರ್​ಗಳು ಬಂದಿವೆ. ಮೂರ್ನಾಲ್ಕು ಮಾತ್ರ ಚಾಲ್ತಿಯಲ್ಲಿವೆ. ಇನ್ನುಳಿದ 16 ವೆಂಟಿಲೇಟರ್​ಗಳು ಟೆಕ್ನಿಷಿಯನ್ಸ್​ಗಳಿಲ್ಲದೇ ಧೂಳು ತಿನ್ನುತ್ತಿವೆ.

    ಧಾರವಾಡ: 20 ವೆಂಟಿಲೇಟರ್​ಗಳು ಪೂರೈಕೆಯಾಗಿದ್ದು, ಬಳಕೆಯಾಗುತ್ತಿವೆ.

    ಗದಗ: ಪಿಎಂ ಕೇರ್ಸ್ ಸೆಂಟರ್​ನಿಂದ ಬಂದಿರುವ 15 ಸೇರಿ ಒಟ್ಟು 58 ವೆಂಟಿಲೇಟರ್ ಬೆಡ್​ಗಳಿದ್ದು ಎಲ್ಲವೂ ಬಳಕೆ

    ಉತ್ತರ ಕನ್ನಡ: ಪಿಎಂ ಕೇರ್ಸ್​ನಿಂದ ವೆಂಟಿಲೇಟರ್ ಪೂರೈಕೆಯಾಗಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿರುವ 45 ವೆಂಟಿಲೇಟರ್​ಗಳ ಬಳಕೆ

    ದಾವಣಗೆರೆ: 45 ವೆಂಟಿಲೇಟರ್​ಗಳಿವೆ. ಪಿಎಂ ಕೇರ್ಸ್​ನಿಂದ 35 ವೆಂಟಿಲೇಟರ್​ಗಳಿದ್ದು ಸದ್ಯಕ್ಕೆ 30 ಬಳಕೆಯಲ್ಲಿವೆ.

    ಚಿತ್ರದುರ್ಗ: ಜಿಲ್ಲಾಸ್ಪತ್ರೆಗೆ ಪೂರೈಕೆಯಾಗಿರುವ 30ರಲ್ಲಿ 20ನ್ನು ಮಾತ್ರ ಅಳವಡಿಸಲಾಗಿದೆ. ತಾಲೂಕು ಆಸ್ಪತ್ರೆಗಳಿಗೆ 15 ರಲ್ಲಿ 8 ಅನ್ನು ಅಳವಡಿಸಲಾಗಿದೆ.

    ಬೆಳಗಾವಿ: ಜಿಲ್ಲಾಸ್ಪತ್ರೆಗೆ 20 ವೆಂಟಿಲೇಟರ್ ನೀಡಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಐಸಿಯು ಘಟಕದಲ್ಲಿರುವ ವೆಂಟಿಲೇಟರ್ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.

    ರಾಯಚೂರು: ರಿಮ್್ಸ ಆಸ್ಪತ್ರೆಯಲ್ಲಿ ಪಿಎಂ ಕೇರ್ಸ್​ನಿಂದ ಬಂದ 40 ವೆಂಟಿಲೇಟರ್​ಗಳು ಸಮರ್ಪಕವಾಗಿ ಕಾರ್ಯ

    ಕೊಪ್ಪಳ: 29ರಲ್ಲಿ 16 ವೆಂಟಿಲೇಟರ್ ಬಳಕೆ ಆಗುತ್ತಿವೆ.

    ಬಳ್ಳಾರಿ: ಪಿಎಂ ಕೇರ್ಸ್​ನಿಂದ ಬಂದ 22 ವೆಂಟಿಲೇಟರ್​ಗಳು ಬಳಕೆಯಲ್ಲಿವೆ.

    ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಪಿಎಂ ಕೇರ್ಸ್​ನಿಂದ 15 ವೆಂಟಿಲೇಟರ್ ನೀಡಿದ್ದು, ಕಾರ್ಯನಿರ್ವಹಿಸುತ್ತಿವೆ. ತಾಲೂಕು ಆಸ್ಪತ್ರೆಗಳು ಸೇರಿ 66 ವೆಂಟಿಲೇಟರ್ ಇದ್ದು, ಈ ಪೈಕಿ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ 3 ವೆಂಟಿಲೇಟರ್ ಮೂಲೆಗೆ ಬಿದಿವೆೆ.

    ಚಿಕ್ಕಮಗಳೂರು: 28 ವೆಂಟಿಲೇಟರ್​ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ತಾಲೂಕು ಪ್ರಾಥಮಿಕ ಕೇಂದ್ರಗಳಲ್ಲಿರುವ 30ಕ್ಕೂ ಹೆಚ್ಚು ವೆಂಟಿಲೇಟರ್​ಗಳಲ್ಲಿ 6 ಮಾತ್ರ ಕೆಲಸ ಮಾಡುತ್ತಿದ್ದು ಉಳಿದಂತೆ ನಿರ್ವಹಣೆ ಕೊರತೆಯಿಂದ ಮೂಲೆ ಸೇರಿವೆ.

    ಉಡುಪಿ: 10 ವೆಂಟಿಲೇಟರ್​ಗಳನ್ನೂ ಕೋವಿಡ್ ರೋಗಿಗಳಿಗಾಗಿ ಬಳಸಲಾಗುತ್ತಿದೆ. ಕಳೆದ ವಾರ ಪಿಎಂ ಕೇರ್ಸ್ ನಿಂದ ಬಂದಿದ್ದ 4 ಹೊಸ ವೆಂಟಿಲೇಟರ್​ಗಳನ್ನೂ ಬಳಕೆ ಮಾಡಲಾಗುತ್ತಿದೆ.

    ‘ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್​.. ಲಾಕ್​ಡೌನ್​ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ

    ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts