

ಹೈದರಾಬಾದ್: ಹೊಸ ವರ್ಷದಂದೇ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದೆ. ರಸ್ತೆ ಅಪಘಾತದಲ್ಲಿ ಸಬ್ ಇನ್ಸ್ಪೆಕ್ಟರ್ ಮತ್ತು ಅವರ ತಂದೆ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತ ಎಸ್ಐಗೆ ಒಂದು ವಾರದ ಹಿಂದಷ್ಟೇ ಮದುವೆ ಆಗಿತ್ತು.
ತೆಲಂಗಾಣದ ಚಿಂತಪಲ್ಲಿ ಮಂಡಲದಲ್ಲಿ ಆರ್ಟಿಸಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಮೃತ ಎಸ್ಐ ಅನ್ನು ನೆನವತ್ ಶ್ರೀನು ನಾಯಕ್ ಎಂದು ಗುರುತಿಸಲಾಗಿದೆ. ವಿಕರಾಬಾದ್ನಲ್ಲಿ ಎಸ್ಐ ಆಗಿದ್ದರು. ಅವರ ತಂದೆಯೂ ಕೂಡ ದುರ್ಮರಣಕ್ಕೀಡಾಗಿದ್ದಾರೆ.
ಎಸ್ಐ ಶ್ರೀನು ನಾಯಕ್ ಒಂದು ವಾರದ ಹಿಂದಷ್ಟೇ ಮದುವೆ ಆಗಿದ್ದರು. ಇವರು ರಂಗಾರೆಡ್ಡಿ ಜಿಲ್ಲೆಯ ಮಡ್ಗುಲ ಮಂಡಲದ ಮಾನ್ಯಾ ತಾಂಡದ ನಿವಾಸಿ. ಹೈದರಾಬಾದ್ನಿಂದ ದೇವರಕೊಂಡಕ್ಕೆ ಪ್ರಯಾಣಿಸುತ್ತಿದ್ದ ಆರ್ಟಿಸಿ ಬಸ್ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಒಳಗೆ ಇದ್ದ ಎಸ್ಐ ಮತ್ತು ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಎಸ್ಐ ತಮ್ಮ ತಂದೆ ಜತೆಗೆ ಆಟೋದಲ್ಲಿ ಮನೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.
ಎಸ್ಐ ಸಾವಿನಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಎಸ್ಐ ಅಕಾಲಿನ ನಿಧನಕ್ಕೆ ಸಹೋದ್ಯೋಗಿಗಳು ಕೂಡ ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್)