

ಮುಂಬೈ: ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜುವುದಾಗಿ ಹೇಳಿ ಸೇತುವೆ ಮೇಲಿಂದ ಜಿಗಿದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಮಾಲೆಂಗಾವ್ನಲ್ಲಿ ನಿನ್ನೆ (ಜುಲೈ 14) ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರೀ ಮಳೆಗೆ ತುಂಬಿ ಭೋರ್ಗರೆಯುತ್ತಿರುವ ಗಿರ್ನಾ ನದಿಗೆ 23 ವರ್ಷದ ಯುವಕ ಸೇತುವೆ ಮೇಲಿಂದ ಜಿಗಿಯುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿದೆ.
ಯುವಕನ ಹೆಸರು ನಯೀಮ್ ಅಮೀನ್. ನಿನ್ನೆಯಿಂದಲೂ ಯುವಕನಿಗಾಗಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಈವರೆಗೂ ಆತ ಸುಳಿವು ಸಿಕ್ಕಿಲ್ಲ. ಸದ್ಯ ಶೋಧ ಕಾರ್ಯಾಚರಣೆ ಮುಂದುವರಿದಿದೆ. ನೀರಿನ ಸೆಳೆತಕ್ಕಿ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಮಹಾರಾಷ್ಟ್ರದ ಅನೇಕ ಜಿಲ್ಲೆಗಳು ಕಳೆದ ಒಂದು ವಾರದಿಂದ ಭಾರೀ ಮಳೆಗೆ ಸಾಕ್ಷಿಯಾಗಿದೆ. ಪುಣೆ, ನಾಸಿಕ್ ಸೇರಿದಂತೆ ಇತರೆ 3 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಳೆ ಪರಿಣಾಮ ಪಾಲ್ಘರ್ ಜಿಲ್ಲೆಯ ವಾಸೈ ನಗರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿದ್ದಾರೆ. ಅಲ್ಲದೆ, ಗೊಂಡಿಯಾ ಜಿಲ್ಲೆಯಲ್ಲಿ ನಾಲ್ವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಪಶ್ಚಿಮ ಕರಾವಳಿ ಸೇರಿದಂತೆ ಭಾರತದ ಇತರ ಏಳು ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 22 ನದಿ ತಾಣಗಳಲ್ಲಿ ಎಚ್ಚರಿಕೆಯ ಮಟ್ಟಕ್ಕಿಂತ ಹೆಚ್ಚಿನ ನೀರು ಹರಿಯುವುದರಿಂದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ನಿರೀಕ್ಷೆಯಿದೆ. ಈ ಬಗ್ಗೆ ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ. (ಏಜೆನ್ಸೀಸ್)