

ನವದೆಹಲಿ: ಸ್ವಾವಲಂಬಿ ಮತ್ತು ಆಧುನಿಕ ಭಾರತವನ್ನು ಮಾಡುವುದು ನಮಗೆ ಬಹಳ ಮುಖ್ಯವಾಗಿದೆ. ದೇಶವನ್ನು ಆಧುನಿಕತೆಯ ದಿಕ್ಕಿನಲ್ಲಿ ಮುನ್ನಡೆಸಲು ಈ ಬಜೆಟ್ ಹಲವಾರು ಪ್ರಮುಖ ಯೋಜನೆಗಳನ್ನು ಒಳಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಿನ್ನೆಯಷ್ಟೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಕುರಿತು ಬಿಜೆಪಿ ಪಕ್ಷ ದೇಶಾದ್ಯಂತ "ಆತ್ಮನಿರ್ಭರ ಅರ್ಥವ್ಯವಸ್ಥೆ" ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಜಿಲ್ಲಾ ಮಟ್ಟದ ಆಯ್ದ ಸ್ಥಳಗಳಲ್ಲಿ ಪ್ರಧಾನಿ ಭಾಷಣವನ್ನು ವೀಕ್ಷಿಸಲು ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿದೆ.
ಬಜೆಟ್ ಬಗ್ಗೆ ವಿವರಣೆ ನೀಡಲು ನನಗೆ ಅವಕಾಶ ನೀಡಿದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಧನ್ಯವಾದಗಳು ಎಂದು ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಅವರು ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಕರೊನಾ ಸಮಯದಲ್ಲಿ ಇದು ಉತ್ತಮ ಬಜೆಟ್ ಆಗಿದೆ. ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಹೊಸ ವಿಶ್ವ ಕ್ರಮಾಂಕದ ಸಾಧ್ಯತೆಯಿದೆ. ಇಂದು ಭಾರತವನ್ನು ನೋಡುವ ಪ್ರಪಂಚದ ದೃಷ್ಟಿಕೋನವು ಬಹಳಷ್ಟು ಬದಲಾಗಿದೆ. ಈಗ, ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮುಂದಿನ ಭವಿಷ್ಯದ ದೃಷ್ಟಿಯಿಂದ ಬಜೆಟ್ನಲ್ಲಿ ಹಲವು ಯೋಜನೆಗಳನ್ನು ತರಲಾಗಿದೆ. ಕರೊನಾ ನಂತರದ ಕಾಲವು ತುಂಬಾ ಬದಲಾವಣೆಯಾಗಲಿದ್ದು, ಆ ಬದಲಾವಣೆಗೆ ನಾವು ತೆರೆದುಕೊಂಡಿದ್ದೇವೆ. ಭಾರತದ ಬಗೆಗಿನ ವಿಶ್ವದ ಬದಲಾದ ದೃಷ್ಟಿಕೋನದೊಂದಿಗೆ, ನಮ್ಮ ಆರ್ಥಿಕತೆಯನ್ನು ಬಲಪಡಿಸುವ ಮೂಲಕ ದೇಶವನ್ನು ತ್ವರಿತ ಗತಿಯಲ್ಲಿ ಮುನ್ನಡೆಸುವುದು ನಮಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಭಾರತ ಆತ್ಮನಿರ್ಭರ ಆಗುವ ಅವಶ್ಯಕತೆಯಿದೆ. ಸ್ವಾವಲಂಬಿ ಮತ್ತು ಆಧುನಿಕ ಭಾರತವನ್ನು ಮಾಡುವುದು ನಮಗೆ ಬಹಳ ಮುಖ್ಯವಾಗಿದೆ. ಭಾರತವನ್ನು ಆಧುನಿಕತೆಯ ದಿಕ್ಕಿನಲ್ಲಿ ಮುನ್ನಡೆಸಲು ಈ ಬಜೆಟ್ ಹಲವಾರು ಪ್ರಮುಖ ನಿಬಂಧನೆಗಳನ್ನು ಹೊಂದಿದೆ. ಕಳೆದ 7 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳಿಂದ ಭಾರತದ ಆರ್ಥಿಕತೆ ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಸಮರ್ಥನೆ ನೀಡಿದರು.
ನಿರ್ಮಲಾ ಅವರು ಆರ್ಥಿಕತೆ ಚೇತರಿಗೆ ದೃಷ್ಟಿಕೋನ ಇಟ್ಟುಕೊಂಡು ಉತ್ತಮವಾದ ಬಜೆಟ್ ಅನ್ನು ಮಂಡಿಸಿದ್ದಾರೆ, ಪ್ರತಿಪಕ್ಷಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲರೂ ಈ ಬಜೆಟ್ ಅನ್ನು ಮೆಚ್ಚಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಪ್ರತಿಪಕ್ಷಗಳಿಗೆ ಚಾಟಿ ಬೀಸಿದರು.
ಈ ಬಜೆಟ್‌ಗೆ ಬಹುತೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 7 ವರ್ಷಗಳ ಹಿಂದೆ ಭಾರತದ ಜಿಡಿಪಿ 1 ಲಕ್ಷ 10 ಸಾವಿರ ಕೋಟಿ ರೂ.ಗಳಷ್ಟಿತ್ತು ಆದರೆ, ಇಂದು ಅದು ಸುಮಾರು 2 ಲಕ್ಷದ 30 ಸಾವಿರ ಕೋಟಿ ರೂ. ಆಗಿದೆ. ದೇಶದ ವಿದೇಶಿ ವಿನಿಮಯ ಮೀಸಲು ಕೂಡ 200 ಶತಕೋಟಿ ಡಾಲರ್ನಿಂದ 630 ಶತಕೋಟಿ ಡಾಲರ್ಗೆ ಏರಿದೆ. ಇದಕ್ಕೆಲ್ಲಾ ನಮ್ಮ ಸರ್ಕಾರದ ಪರಿಣಾಮಕಾರಿ ನೀತಿಗಳೇ ಕಾರಣ ಎಂದು ಪ್ರಧಾನಿ ಮೋದಿ ಹೇಳಿದರು.
ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೂ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಗಡಿಯಲ್ಲಿರುವ ಶಾಲೆಗಳಲ್ಲಿ ಎನ್‌ಸಿಸಿ ಕೇಂದ್ರಗಳನ್ನು ತರಲಾಗುವುದು. ಸಾವಯವ ಕೃಷಿಯತ್ತ ಗಮನಹರಿಸಿ ಭಾರತೀಯ ಕೃಷಿಯನ್ನು ಆಧುನೀಕರಿಸುವ ಬಗ್ಗೆಯೂ ಬಜೆಟ್ ಗಮನಹರಿಸಿದೆ. ಇದರಿಂದ ಕೃಷಿಗೆ ಲಾಭದಾಯಕವಾಗಲಿದೆ. ಕಿಸಾನ್ ಡ್ರೋನ್‌ಗಳು ಮತ್ತು ಇತರ ಯಂತ್ರೋಪಕರಣಗಳು ರೈತರಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ತಿಳಿಸಿದರು.