ರಷ್ಯಾ ರಾಕೆಟ್​ ದಾಳಿಗೆ ಯೂಕ್ರೇನಿಯನ್​ ನಟಿ ಒಕ್ಸಾನಾ ಶ್ವೆಟ್ಸ್ ಬಲಿ

Actress
Published on

ಕೀಯೆವ್​: ಯೂಕ್ರೇನ್​ ರಾಜಧಾನಿ ಕೀಯೆವ್​ನಲ್ಲಿರುವ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ರಷ್ಯಾ ನಡೆಸಿದ ರಾಕೆಟ್​ ದಾಳಿಯಲ್ಲಿ ಯೂಕ್ರೇನಿಯನ್​ ನಟಿ ಒಕ್ಸಾನಾ ಶ್ವೆಟ್ಸ್ ಮೃತಪಟ್ಟಿದ್ದಾರೆ.

ಹಾಲಿವುಡ್ ವರದಿಯ ಪ್ರಕಾರ 67 ವರ್ಷದ ಒಕ್ಸನಾ ಯಂಗ್​ ಥಿಯೇಟರ್​ನ ಪ್ರಖ್ಯಾತ ನಟಿ. ಯೂಕ್ರೇನ್​ನ ಅತ್ಯುನ್ನತ ಕಲಾತ್ಮಕ ಗೌರವವಾದ 'ಹಾನರ್ಡ್​ ಆರ್ಟಿಸ್ಟ್​ ಆಫ್​ ಯೂಕ್ರೇನ್​' ಪ್ರಶಸ್ತಿಗೆ ಒಕ್ಸಾನಾ ಭಾಜನರಾಗಿದ್ದಾರೆ. ನಟಿ ಸಂತಾಪ ಸೂಚಿಸಿರುವ ಯಂಗ್ ಥಿಯೇಟರ್​ನ ಅವರ ತಂಡ ನಮ್ಮ ನೆಲಕ್ಕೆ ಬಂದ ಶತ್ರುಗಳಿಗೆ ಎಂದಿಗೂ ಕ್ಷಮೆ ಇಲ್ಲ ಎಂದಿದ್ದಾರೆ.

ಫೆ. 24ರಂದು ರಷ್ಯಾ, ಯೂಕ್ರೇನ್ ಮೇಲೆ ಯುದ್ಧ ಘೋಷಿಸಿತು. ನ್ಯಾಟೋ ಪಡೆಗೆ ಸೇರುವ ಯೂಕ್ರೇನ್​ ಆಸೆಯನ್ನು ರಷ್ಯಾ ತಿರಸ್ಕರಿಸುತ್ತಾ ಬಂದಿತ್ತು. ಅಲ್ಲದೆ, ಎಚ್ಚರಿಕೆಯನ್ನು ನೀಡಿತ್ತು. ಆದರೆ, ರಷ್ಯಾ ಎಚ್ಚರಿಕೆಗೆ ಬಗ್ಗದ ಯೂಕ್ರೇನ್​ ನ್ಯಾಟೋ ಪಡೆ ಸೇರುವುದಾಗಿ ತಿಳಿಸಿತು. ಈ ವಿಚಾರದಲ್ಲಿ ಎರಡು ರಾಷ್ಟ್ರಗಳ ನಡುವೆ ತಿಕ್ಕಾಟ ಮುಂದುರಿದುಕೊಂಡೇ ಬಂದಿತ್ತು. ಅಂತಿಮವಾಗಿ ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಯೂಕ್ರೇನ್​ ವಿರುದ್ಧ ಘೋಷಣೆ ಮಾಡಿಯೇ ಬಿಟ್ಟರು.

ಫೆ.24ರಂದು ಶುರುವಾದ ಯುದ್ಧ ಇಂದಿನವರೆಗೂ ಮುಂದುವರಿದುಕೊಂಡು ಬರುತ್ತಲೇ ಇದೆ. ಯಾವಾಗ ಅಂತ್ಯವಾಗುತ್ತದೋ ಎಂದು ಜನರು ಎದುರು ನೋಡುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಮಂಡಿಸಿದರೂ ಅದಕ್ಕೆ ರಷ್ಯಾ ಕ್ಯಾರೆ ಎನ್ನಲಿಲ್ಲ. ಅಲ್ಲದೆ, ಅಮೆರಿಕ, ಜರ್ಮನಿ, ಬ್ರಿಟನ್​, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಅನೇಕ ರಾಷ್ಡ್ರಗಳು ರಷ್ಯಾ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಿದರು ರಷ್ಯಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಯುದ್ಧವನ್ನು ಮುಂದವರಿಸಿದ್ದು, ಇಡೀ ಯೂಕ್ರೇನ್​ ಅನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗ್ಗುತ್ತಿದೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net